ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯಭಾಗದಲ್ಲಿರುವ ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ಕಟ್ಟಡ 'ಕುಮಾರ ಕೃಪಾ' ಇಂದು ಹೊಸ ರೂಪ ಪಡೆದುಕೊಂಡಿದೆ. ದಶಕಗಳ ಕಾಲ ರಾಜ್ಯದ ಅತಿಥಿ ಸತ್ಕಾರದ ಕೇಂದ್ರವಾಗಿದ್ದ ಈ ಐತಿಹಾಸಿಕ ಬಂಗಲೆ, ಇದೀಗ ನವೀಕರಣಗೊಂಡು 'ಗಂಗಾ' ಎಂಬ ಹೊಸ ನಾಮಧೇಯದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ನಿವಾಸ ಹಾಗೂ ಶಕ್ತಿಕೇಂದ್ರವಾಗಿ ಬದಲಾಗಿದೆ. ಒಂದು ಕಾಲದಲ್ಲಿ ನೂರು ಎಕರೆಗೂ ಅಧಿಕ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿದ್ದ ದಿವಾನರ ಖಾಸಗಿ ಬಂಗಲೆ, ಕಾಲಕ್ರಮೇಣ ಹದಿನಾಲ್ಕು ಎಕರೆಗೆ ಸಂಕುಚಿತಗೊಂಡು, ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿ ರೂಪಾಂತರಗೊಂಡ ಇತಿಹಾಸವೇ ರೋಚಕ.
19ನೇ ಶತಮಾನದ ಅಂತ್ಯಭಾಗದಲ್ಲಿ ಮೈಸೂರು ಸಂಸ್ಥಾನದ ದೀರ್ಘಕಾಲದ ದಿವಾನರಾಗಿದ್ದ ಹಾಗೂ 'ಆಧುನಿಕ ಬೆಂಗಳೂರಿನ ನಿರ್ಮಾಪಕ' ಎಂದೇ ಖ್ಯಾತರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರು ತಮ್ಮ ನಿವೃತ್ತಿ ಜೀವನಕ್ಕಾಗಿ ಬೆಂಗಳೂರಿನಲ್ಲಿ ಪ್ರದೇಶದಲ್ಲಿ ವಿಶಾಲವಾದ ಜಾಗವನ್ನು ಖರೀದಿಸಿ, 1897ರ ಸುಮಾರಿಗೆ ಭವ್ಯವಾದ ಬಂಗಲೆಯೊಂದನ್ನು ನಿರ್ಮಿಸಿದರು.
ಮೂಲತಃ ಕೇರಳದ ಪಾಲಕ್ಕಾಡ್ನ 'ಕುಮಾರಪುರಂ'ನವರಾಗಿದ್ದ ಶೇಷಾದ್ರಿ ಅಯ್ಯರ್ ಅವರ ಕುಲದೇವರು ಸುಬ್ರಹ್ಮಣ್ಯ ಸ್ವಾಮಿ (ಕುಮಾರಸ್ವಾಮಿ). ಕುಲದೇವರ ಆಶೀರ್ವಾದದಿಂದ ಕಟ್ಟಿಸಿದ ಮನೆ ಎಂಬ ಭಕ್ತಿಭಾವದಿಂದ ಇದಕ್ಕೆ 'ಕುಮಾರ ಕೃಪಾ' ಎಂದು ಹೆಸರಿಟ್ಟರು. ವಿಧಿಯಾಟವೆಂದರೆ, 1901ರಲ್ಲಿ ಶೇಷಾದ್ರಿ ಅಯ್ಯರ್ ನಿಧನರಾದ ಕಾರಣ ಅವರಿಗೆ ಈ ಮನೆಯಲ್ಲಿ ಹೆಚ್ಚು ಕಾಲ ವಾಸಿಸಲು ಸಾಧ್ಯವಾಗಲಿಲ್ಲ.
19ನೇ ಶತಮಾನದಲ್ಲಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದ ಬಹುತೇಕ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳು ಬ್ರಿಟಿಷ್ ಗೋಥಿಕ್ ಅಥವಾ ಯುರೋಪಿಯನ್ ಶೈಲಿಯಲ್ಲಿದ್ದವು. ಆದರೆ, ಶೇಷಾದ್ರಿ ಅಯ್ಯರ್ ಅವರು ತಮ್ಮ ಮನೆ ಸಂಪೂರ್ಣ ಭಾರತೀಯ ಸಂಪ್ರದಾಯ ಮತ್ತು ವಾಸ್ತುಶಿಲ್ಪದ ಪ್ರತೀಕವಾಗಿರಬೇಕೆಂದು ಪಟ್ಟುಹಿಡಿದರು. ಅರಮನೆ ಆಸ್ತಿಗಳ ನಿಯಂತ್ರಕರಾಗಿದ್ದ ಈರೋಡ್ ಸುಬ್ಬರಾವ್ ಅವರ ಮಾರ್ಗದರ್ಶನದಲ್ಲಿ ಎರಡು ಅಂತಸ್ತಿನ ಈ ಭವ್ಯ ಕಲ್ಲಿನ ಕಟ್ಟಡ ತಲೆ ಎತ್ತಿತು. ವಿಶಾಲವಾದ ಮೊಗಸಾಲೆ, ಬೀಟೆ ಮರದ ಕೆತ್ತನೆಯ ಬಾಗಿಲು ಮತ್ತು ಪೀಠೋಪಕರಣಗಳು, ಗಾಳಿ-ಬೆಳಕಿಗೆ ಪೂರಕವಾದ ತೆರೆದ ಅಂಗಳ ಹಾಗೂ ಭೂಗತ ನೆಲಮಾಳಿಗೆ ಈ ಕಟ್ಟಡದ ವಿಶೇಷತೆಯಾಗಿದೆ. ವಿಶೇಷವೆಂದರೆ, ಸ್ವಾತಂತ್ರ್ಯಾನಂತರ ಕೆಂಗಲ್ ಹನುಮಂತಯ್ಯನವರು ವಿಧಾನಸೌಧವನ್ನು ನಿರ್ಮಿಸುವಾಗ, ಭಾರತೀಯ ವಾಸ್ತುಶಿಲ್ಪದ ಪ್ರೇರಣೆಗಾಗಿ ಈ 'ಕುಮಾರ ಕೃಪಾ' ಕಟ್ಟಡದ ವಿನ್ಯಾಸವನ್ನೂ ಅಧ್ಯಯನ ಮಾಡಲಾಗಿತ್ತು ಎಂಬ ಐತಿಹಾಸಿಕ ಉಲ್ಲೇಖಗಳಿವೆ.
ಶೇಷಾದ್ರಿ ಅಯ್ಯರ್ ಅವರ ನಿಧನದ ನಂತರ ಅವರ ಕುಟುಂಬಸ್ಥರು ಬೇರೆಡೆ ನೆಲೆಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಅವಧಿಯಲ್ಲಿ (1915–1918ರ ನಡುವೆ) ಮೈಸೂರು ಸಂಸ್ಥಾನವು ಅಯ್ಯರ್ ಅವರ ಪುತ್ರರಿಂದ ಈ ಬಂಗಲೆಯನ್ನು ಖರೀದಿಸಿತು. ಸ್ವಾತಂತ್ರ್ಯಾನಂತರ ಇದನ್ನು ಅಧಿಕೃತ ರಾಜ್ಯ ಅತಿಥಿಗೃಹವಾಗಿ (State VIP Guest House) ಪರಿವರ್ತಿಸಲಾಯಿತು. ಆರಂಭದಲ್ಲಿ ಕುಮಾರ ಕೃಪಾ ಸಂಕೀರ್ಣವು 100 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿತ್ತು. ಆದರೆ ಬೆಂಗಳೂರು ಬೆಳೆದಂತೆ ಅಭಿವೃದ್ಧಿ ಮತ್ತು ಸಾರ್ವಜನಿಕ ಉದ್ದೇಶಗಳಿಗಾಗಿ ಈ ಜಾಗವನ್ನು ಹಂತ ಹಂತವಾಗಿ ಹಂಚಿಕೆ ಮಾಡಲಾಯಿತು. ನಗರದ ವಿಸ್ತರಣೆಗಾಗಿ ಬಂಗಲೆಯ ಸುತ್ತಮುತ್ತಲಿನ ದೊಡ್ಡ ಭಾಗವನ್ನು ವಿಂಗಡಿಸಿ 'ಕುಮಾರ ಪಾರ್ಕ್ ಪೂರ್ವ' ಮತ್ತು 'ಪಶ್ಚಿಮ' ಬಡಾವಣೆಗಳನ್ನು ನಿರ್ಮಿಸಲಾಯಿತು. ಮಹಾತ್ಮ ಗಾಂಧೀಜಿಯವರ ಸ್ಮರಣಾರ್ಥ 'ಗಾಂಧಿ ಭವನ' ನಿರ್ಮಾಣಕ್ಕೆ ಒಂದಷ್ಟು ಜಾಗವನ್ನು ನೀಡಲಾಯಿತು. 1970ರ ದಶಕದಲ್ಲಿ ಕೇಂದ್ರ ಪ್ರವಾಸೋದ್ಯಮ ಇಲಾಖೆಯ ಪಂಚತಾರಾ ಹೋಟೆಲ್ 'ದಿ ಅಶೋಕ್' ನಿರ್ಮಾಣಕ್ಕಾಗಿ ಸುಮಾರು 10 ಎಕರೆಗೂ ಅಧಿಕ ಭೂಮಿಯನ್ನು ಹಸ್ತಾಂತರಿಸಲಾಯಿತು.
ಸುತ್ತಮುತ್ತಲಿನ ರಸ್ತೆಗಳ ಅಗಲೀಕರಣ ಹಾಗೂ ಸರ್ಕಾರಿ ಕಚೇರಿಗಳ ನಿರ್ಮಾಣದ ನಂತರ, ಒಂದು ಕಾಲದಲ್ಲಿ ನೂರು ಎಕರೆಯಷ್ಟಿದ್ದ ರಾಜವೈಭವದ ಕುಮಾರ ಕೃಪಾ ಆವರಣವು ಅಂತಿಮವಾಗಿ 14 ಎಕರೆಗೆ ಸೀಮಿತವಾಯಿತು.
ದಶಕಗಳ ಕಾಲ ಕುಮಾರ ಕೃಪಾ ಕೇವಲ ಅತಿಥಿಗೃಹವಾಗಿರಲಿಲ್ಲ. ಅದು ಕರ್ನಾಟಕದ ರಾಜಕೀಯ ಇತಿಹಾಸದ ಮೂಕಸಾಕ್ಷಿಯಾಗಿತ್ತು. ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ದಲೈ ಲಾಮಾ ಸೇರಿದಂತೆ ದೇಶ-ವಿದೇಶಗಳ ಅತಿಗಣ್ಯರು ಇಲ್ಲಿ ವಾಸ್ತವ್ಯ ಹೂಡಿದ್ದರು. ಕರ್ನಾಟಕದಲ್ಲಿ ಸರ್ಕಾರ ರಚನೆ, ಸಚಿವ ಸಂಪುಟ ವಿಸ್ತರಣೆ, ಬಂಡಾಯ ಶಮನದಂತಹ ಹೈವೋಲ್ಟೇಜ್ ರಾಜಕೀಯ ಸಭೆಗಳಿಗೆ ಕುಮಾರ ಕೃಪಾದ ಕೊಠಡಿಗಳು ಸಾಕ್ಷಿಯಾಗಿವೆ.
ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿಗಳ ನಿವಾಸ ಮತ್ತು 'ವಾಸ್ತು' ನಂಬಿಕೆಗಳಿಗೆ ಅವಿನಾಭಾವ ಸಂಬಂಧವಿದೆ. 'ಅನುಗ್ರಹ' ಬಂಗಲೆಯನ್ನು ವಾಸ್ತು ದೋಷದ ಭಯದಿಂದ ಮುಖ್ಯಮಂತ್ರಿಗಳು ತಿರಸ್ಕರಿಸಿದರೆ, 'ಕಾವೇರಿ' ನಿವಾಸವು ರಾಜಕಾರಣಿಗಳ ಪಾಲಿಗೆ ಅತ್ಯಂತ ಅದೃಷ್ಟದ ಮನೆಯಾಗಿ ಗುರುತಿಸಿಕೊಂಡಿದೆ. 2026ರಲ್ಲಿ ಸಿದ್ದರಾಮಯ್ಯನವರು ಮುಖ್ಯಮತ್ರಿ ಸ್ಥಾನದಿಂದ ಕೆಳಗಿಳಿದ ನಂತರವೂ, ಮಾಜಿ ಮುಖ್ಯಮಂತ್ರಿಗಳ ನೆಲೆಯಲ್ಲಿ 'ಕಾವೇರಿ' ನಿವಾಸದಲ್ಲಿಯೇ ಮುಂದುವರಿಯಲು ಬಯಸಿದರು. ಹೀಗಾಗಿ, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪರ್ಯಾಯ ಅಧಿಕೃತ ನಿವಾಸದ ಅಗತ್ಯವಿತ್ತು. ಆಗ ಸರ್ಕಾರದ ಕಣ್ಣಿಗೆ ಬಿದ್ದಿದ್ದೇ ಶತಮಾನದ ಇತಿಹಾಸ ಹೊಂದಿರುವ, ಉತ್ತಮ ವಾಸ್ತು ಹಾಗೂ ವಿಶಾಲ ಆವರಣ ಹೊಂದಿರುವ ಹಳೆಯ ಕುಮಾರ ಕೃಪಾ ಪಾರಂಪರಿಕ ಕಟ್ಟಡ. ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ, ವಾಸ್ತು ತಜ್ಞರ ಸಲಹೆಯಂತೆ ಒಳಾಂಗಣವನ್ನು ಸಂಪೂರ್ಣ ನವೀಕರಿಸಲಾಗಿದೆ.
ರಾಜ್ಯದ ನದಿಗಳ ಹೆಸರನ್ನು ಸಿಎಂ ನಿವಾಸಗಳಿಗೆ ಇಡುವ ಸಂಪ್ರದಾಯದಂತೆ ಈ ನವೀಕೃತ ನಿವಾಸಕ್ಕೆ ಪವಿತ್ರ ನದಿ 'ಗಂಗಾ' ಎಂದು ನಾಮಕರಣ ಮಾಡಲಾಗಿದೆ. ಅಷ್ಟೇ ಅಲ್ಲದೆ, ಬಂಗಲೆಯ ಒಳಗಿನ ವಿವಿಧ ಕೊಠಡಿಗಳು ಮತ್ತು ಸಭಾಂಗಣಗಳಿಗೆ ಹೇಮಾವತಿ, ತುಂಗಭದ್ರಾ, ಶಾಲ್ಮಲಾ ಮುಂತಾದ ನದಿಗಳ ಹೆಸರನ್ನು ಇಡಲಾಗಿದೆ. ನೂರು ಎಕರೆಯ ದಿವಾನರ ಮನೆಯಾಗಿ ಶುರುವಾಗಿ, ರಾಜ್ಯದ ಅತಿಥಿಗೃಹವಾಗಿ ಮೆರೆದು, ಹದಿನಾಲ್ಕು ಎಕರೆಯ ಆವರಣದಲ್ಲಿ ಇಂದು 'ಗಂಗಾ' ಹೆಸರಿನಲ್ಲಿ ನಾಡಿನ ಶಕ್ತಿಕೇಂದ್ರವಾಗಿ ಹೊಸ ಅಧ್ಯಾಯವನ್ನು ಆರಂಭಿಸಿದೆ. ಮುಂದೆ ಹದಿನಾಲ್ಕರಿಂದ ಇನ್ನೆಷ್ಟು ಇಳಿಯುತ್ತದೋ ಮುಂದಿನ ಪೀಳಿಗೆಗಳಿಗೆ ತಿಳಿಯಬಹುದಷ್ಟೇ.
✍ಲಲಿತಶ್ರೀ ಪ್ರೀತಂ ರೈ