ಮಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸೈಬರ್ ವಂಚಕರು ಸಾರ್ವಜನಿಕರ ಮೊಬೈಲ್ ಫೋನ್ಗಳಿಗೆ ಎಸ್ಎಂಎಸ್ (SMS) ಹಾಗೂ ವಾಟ್ಸಾಪ್ (WhatsApp) ಮೂಲಕ ನಕಲಿ ಲಿಂಕ್ಗಳು ಹಾಗೂ ಎಪಿಕೆ (APK) ಫೈಲ್ಗಳನ್ನು ಕಳುಹಿಸಿ ಸೈಬರ್ ವಂಚನೆ ಎಸಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಮಂಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.
ಈ ರೀತಿಯ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ವಂಚಕರ ಜಾಲಕ್ಕೆ ಸಿಲುಕಿ ಸಾರ್ವಜನಿಕರು ಒಟ್ಟು ಸುಮಾರು 44 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಇಂತಹ ಕೃತ್ಯಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಅಧಿಕೃತ ಇ-ಚಲನ್ ವೆಬ್ಸೈಟ್ನಲ್ಲಿ ಅಥವಾ ಹತ್ತಿರದ ಸಂಚಾರಿ ಪೊಲೀಸ್ ಠಾಣೆಗೆ ತೆರಳಿ ಖುದ್ದಾಗಿ ಪರಿಶೀಲಿಸಿದ ನಂತರವೇ ದಂಡದ ಮೊತ್ತವನ್ನು ಪಾವತಿಸುವಂತೆ ಮನವಿ ಮಾಡಲಾಗಿದೆ.
ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಲು ಸಾರ್ವಜನಿಕರು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು:
ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಬಾಕಿ ಇದೆಯೇ ಎಂಬುದನ್ನು ಸರ್ಕಾರದ ಅಧಿಕೃತ ವೆಬ್ಸೈಟ್ https://echallan.parivahan.nic.in ನಲ್ಲಿ ಮಾತ್ರ ಪರಿಶೀಲಿಸಿ, ಅಲ್ಲಿಯೇ ದಂಡದ ಮೊತ್ತವನ್ನು ಪಾವತಿಸುವುದು.
ಇ-ಚಲನ್ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ, ಮಂಗಳೂರು ನಗರದ ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ಅಥವಾ ಸಂಚಾರ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಖಚಿತಪಡಿಸಿಕೊಳ್ಳುವುದು.
ಇ-ಚಲನ್ ನೋಟೀಸು ಪೋಸ್ಟ್ ಮೂಲಕ ಸ್ವೀಕೃತವಾಗಿದ್ದರೆ, ಅದರ ದಂಡವನ್ನು Mangaloreone ಅಥವಾ Karnatakaone ನ ಅಧಿಕೃತ ವೆಬ್ಸೈಟ್/ಆ್ಯಪ್ ಮೂಲಕ ಪಾವತಿಸುವುದು.
ಮಾಡಬಾರದ ಕ್ರಮಗಳು :
ಮೊಬೈಲ್ ಫೋನ್ಗೆ ಬರುವ ಯಾವುದೇ ಎಪಿಕೆ (APK) ಫೈಲ್ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಅಥವಾ ಇನ್ಸ್ಟಾಲ್ ಮಾಡಬಾರದು.
ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬಾರದು.
ಇ-ಚಲನ್ ದಂಡ ಪಾವತಿಸುವಂತೆ ಬರುವ ಅಪರಿಚಿತ ಲಿಂಕ್ಗಳ ಮೂಲಕ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ (ATM) ಕಾರ್ಡ್ ವಿವರಗಳು, ಒಟಿಪಿ (OTP) ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು.
ಅಧಿಕೃತ ವೆಬ್ಸೈಟ್ಗಳ ತರಹ ಕಾಣುವ ನಕಲಿ ವೆಬ್ಸೈಟ್ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೇವಲ 'https://' ಇರುವುದರಿಂದಲೇ ಆ ವೆಬ್ಸೈಟ್ ಅಧಿಕೃತವೆಂದು ಪರಿಗಣಿಸಬಾರದು.
ಸಾರ್ವಜನಿಕರು ಮೇಲ್ಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬಹುದು. ತಮ್ಮ ಮೊಬೈಲ್ ಫೋನ್ಗೆ ಬರುವ ಇ-ಚಲನ್ ದಂಡ ಪಾವತಿ ಸಂದೇಶದ ಕುರಿತು ಯಾವುದೇ ಸಂಶಯವಿದ್ದಲ್ಲಿ 0824-2220823 ಸಂಖ್ಯೆಗೆ ಕರೆ ಮಾಡಿ ಸ್ಪಷ್ಟಪಡಿಸಿಕೊಳ್ಳಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.