image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: 12 ಘಟಕಗಳಿಗೆ ಬೀಗ

ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: 12 ಘಟಕಗಳಿಗೆ ಬೀಗ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಪ್ಯಾಕೇಜ್ಡ್ ಕುಡಿಯುವ ನೀರಿನ ತಯಾರಿಕಾ ಘಟಕಗಳ ಮೇಲೆ ಬೃಹತ್ ತಪಾಸಣಾ ಕಾರ್ಯಾಚರಣೆಯನ್ನು ನಡೆಸಿದೆ.  ಅಕ್ಟೋಬರ್ 29 ಮತ್ತು 30ರಂದು ಸತತ ಎರಡು ದಿನಗಳ ಕಾಲ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಒಟ್ಟು 12 ಘಟಕಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಚ್ಚಿಸಿ ಬೀಗ ಹಾಕಲಾಗಿದೆ. 

ಈ ಎರಡು ದಿನಗಳ ಸುದೀರ್ಘ ಕಾರ್ಯಾಚರಣೆಯ ವೇಳೆಯಲ್ಲಿ ತಪಾಸಣಾಧಿಕಾರಿಗಳ ತಂಡವು ರಾಜ್ಯಾದ್ಯಂತ ಒಟ್ಟು 102 ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಪೈಕಿ ಸಂಶಯಾಸ್ಪದ ಹಾಗೂ ಗುಣಮಟ್ಟದ ಪರೀಕ್ಷೆಗಾಗಿ 69 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ನೈರ್ಮಲ್ಯ ಹಾಗೂ ತಾಂತ್ರಿಕ ಲೋಪಗಳನ್ನು ಎಸಗಿದ್ದ 53 ಘಟಕಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ. ಇದಲ್ಲದೆ, ದೇವನಹಳ್ಳಿಯ ಘಟಕವೊಂದರಲ್ಲಿ ಮಾನದಂಡಗಳಿಗೆ ವಿರುದ್ಧವಾಗಿ ತಪ್ಪಾದ ಲೇಬಲಿಂಗ್ ಹೊಂದಿದ್ದ 1 ಲೀಟರ್ ಸಾಮರ್ಥ್ಯದ 82 ಕೇಸ್ ನೀರಿನ ಬಾಟಲಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾದ 12 ಘಟಕಗಳಲ್ಲಿ ಕೋಲಾರ ಮುಳಬಾಗಿಲಿನ ಎಸ್‌ಎಂಆರ್ ಆಕ್ವಾ ಮಿನರಲ್ಸ್, ಹಾಸನದ ಎಸ್.ಪಿ. ಫುಡ್ ಆ್ಯಂಡ್ ಬೆವರೇಜಸ್, ಬೆಂಗಳೂರು ನಗರ ಜಿಲ್ಲೆಯ ಮದನಾಯಕನಹಳ್ಳಿಯ ಅವಂತಿ ಇಂಡಸ್ಟ್ರೀಸ್ ಹಾಗೂ ಓಂ ಶಕ್ತಿ ಮಿನರಲ್ಸ್, ಕಲಬುರಗಿ ಕೆಐಎಡಿಬಿಯ ಆಕ್ವಾ ರಿಫ್ರೆಶ್ ಹಾಗೂ ನಂದಿ ಫುಡ್ ಆ್ಯಂಡ್ ಬೆವರೇಜಸ್, ಬೀದರ್‌ನ ಸಾಯಿ ರಾಮ್ ಫುಡ್ ಬೆವರೇಜಸ್, ಮೈಸೂರು ಗ್ರಾಮಾಂತರದ ದಲಿಯಾ ಬೆವರೇಜಸ್, ಮೈಸೂರಿನ ಬನ್ನಿಮಂಟಪದ ಶ್ರೀ ದೇವಿ ಎಂಟರ್‌ಪ್ರೈಸಸ್, ಮೈಸೂರಿನ ಮೇಟಗಳ್ಳಿಯ ಶ್ರೀ ದುರ್ಗಾ ಎಂಟರ್‌ಪ್ರೈಸಸ್, ದಾವಣಗೆರೆಯ ಚಿರಂತನ್ ಫುಡ್ ಆ್ಯಂಡ್ ಬೆವರೇಜಸ್ ಹಾಗೂ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯ ಎಂ.ಎಸ್. ಫುಡ್ ಆ್ಯಂಡ್ ಬೆವರೇಜಸ್ ಸೇರಿವೆ.

ಸಾರ್ವಜನಿಕರ ಆರೋಗ್ಯ ಹಾಗೂ ಜೀವರಕ್ಷಣೆಯ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಕುಡಿಯುವ ನೀರಿನ ಗುಣಮಟ್ಟ, ನೈರ್ಮಲ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ಕಲುಷಿತ ಅಥವಾ ಕಳಪೆ ನೀರು ಸರಬರಾಜು ಮಾಡುವ ತಯಾರಕರ ವಿರುದ್ಧ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಈ ತಪಾಸಣೆಯು ಕೇವಲ ಎರಡು ದಿನಗಳಿಗೆ ಸೀಮಿತವಾಗಿರದೆ, ಮುಂಬರುವ ದಿನಗಳಲ್ಲೂ ರಾಜ್ಯಾದ್ಯಂತ ನಿರಂತರವಾಗಿ ಮುಂದುವರಿಯಲಿದೆ. ಇದೇ ವೇಳೆ, ಸಾರ್ವಜನಿಕರು ಪ್ಯಾಕೇಜ್ಡ್ ಕುಡಿಯುವ ನೀರಿನ ಬಾಟಲಿ ಅಥವಾ ಕ್ಯಾನ್‌ಗಳನ್ನು ಖರೀದಿಸುವಾಗ ಹೆಚ್ಚಿನ ಎಚ್ಚರ ವಹಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.

ಪ್ರತಿಯೊಬ್ಬ ಗ್ರಾಹಕರೂ ನೀರು ಖರೀದಿಸುವ ಮುನ್ನ ಬಾಟಲಿಯ ಮೇಲೆ FSSAI ಪರವಾನಗಿ ಸಂಖ್ಯೆ, ಅಧಿಕೃತ ISI ಗುರುತು, ತಯಾರಿಕಾ ದಿನಾಂಕ ಹಾಗೂ ಬಾಟಲಿಯ ಸೀಲ್ ಸರಿಯಾಗಿದೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ನೀರಿನ ಗುಣಮಟ್ಟದಲ್ಲಾಗಲಿ ಅಥವಾ ಪ್ಯಾಕಿಂಗ್‌ನಲ್ಲಿ ಯಾವುದೇ ಅನುಮಾನ ಕಂಡುಬಂದಲ್ಲಿ ತಕ್ಷಣವೇ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡುವಂತೆ ಸೂಚಿಸಲಾಗಿದೆ.

Category
ಕರಾವಳಿ ತರಂಗಿಣಿ