ಸವದತ್ತಿ: ರಾಜ್ಯದ ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲಿರುವ ಚಿನ್ನ ಮತ್ತು ಆಭರಣಗಳನ್ನು ಸರಿಯಾದ ಲೆಕ್ಕಪತ್ರದೊಂದಿಗೆ ಸಂರಕ್ಷಿಸಿ, ಅವುಗಳನ್ನು ದೇವರ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳಿಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸವದತ್ತಿಯ ಪ್ರಸಿದ್ಧ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇವಾಲಯಗಳ ಆಭರಣಗಳು ಪೆಟ್ಟಿಗೆಯಲ್ಲೇ ಉಳಿಯದೆ ದೇವರ ಅಲಂಕಾರಕ್ಕೆ ಬಳಕೆಯಾಗಬೇಕು ಎಂದರು. ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಲಭ್ಯವಿರುವ ಸುಮಾರು 42 ಕೆಜಿ ಚಿನ್ನವನ್ನು ದೇವಿಯ ಅಲಂಕಾರಕ್ಕೆ ಬಳಸುವ ಮೂಲಕ ಭಕ್ತರಿಗೆ ದರ್ಶನವನ್ನು ಮತ್ತಷ್ಟು ಆಕರ್ಷಕಗೊಳಿಸಲು ಮುಜರಾಯಿ ಸಚಿವರಿಗೆ ಸೂಚಿಸಿರುವುದಾಗಿ ತಿಳಿಸಿದರು.
ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದ ಸಮಗ್ರ ಅಭಿವೃದ್ಧಿಗೆ ₹215 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ ಅವರು, ತಾಯಿ ಯಲ್ಲಮ್ಮ ಎಲ್ಲ ವರ್ಗದ ಜನರ ದುಃಖ-ಕಷ್ಟಗಳನ್ನು ನಿವಾರಿಸುವ ನಂಬಿಕೆಯ ಶಕ್ತಿಯಾಗಿದ್ದಾಳೆ ಎಂದು ಬಣ್ಣಿಸಿದರು. ಧರ್ಮ ಮತ್ತು ನಂಬಿಕೆಗಳು ಪ್ರತಿಯೊಬ್ಬರ ವೈಯಕ್ತಿಕ ವಿಚಾರವಾಗಿದ್ದು, ಪರಸ್ಪರ ಸಾಮರಸ್ಯದಿಂದ ಬದುಕಬೇಕಿದೆ ಎಂದರು. ಸವದತ್ತಿ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಪ್ರಾಧಿಕಾರ ರಚಿಸಿ ಭದ್ರ ಅಡಿಪಾಯ ಹಾಕಿದ ಹಿರಿಯ ನಾಯಕ ಹಾಗೂ ಸಚಿವ ಎಚ್. ಕೆ. ಪಾಟೀಲ್ ಅವರನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.
ಸ್ಥಳೀಯ ಶಾಸಕ ವಿಶ್ವಾಸ ವಸಂತ ವೈದ್ಯ ಅವರ ಶ್ರಮವನ್ನು ಮೆಚ್ಚಿದ ಉಪಮುಖ್ಯಮಂತ್ರಿಗಳು, ಸವದತ್ತಿ ಪುರಸಭೆಯನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ₹43 ಕೋಟಿ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು. ಕ್ಷೇತ್ರದಲ್ಲಿ ₹500 ಕೋಟಿಗೂ ಅಧಿಕ ವೆಚ್ಚದ ಏತ ನೀರಾವರಿ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಸೂಕ್ತ ನೀರಾವರಿ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಇದೇ ವೇಳೆ ಸಣ್ಣ ಮತ್ತು ಬಡ ರೈತರ ನೆರವಿಗೆ ಧಾವಿಸುವ ‘ನೇಗಿಲಯೋಗಿ’ ನೂತನ ಯೋಜನೆಯನ್ನು ಪ್ರಕಟಿಸಿದ ಅವರು, ಮೂರು ಎಕರೆ ಒಳಗಿನ ಜಮೀನು ಹೊಂದಿರುವ ರೈತರಿಗೆ ಸರ್ಕಾರದ ವತಿಯಿಂದಲೇ ಟ್ರ್ಯಾಕ್ಟರ್ಗಳ ಮೂಲಕ ಉಳುಮೆ ಮಾಡಿಕೊಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು. ಜೊತೆಗೆ ಆಸ್ತಿ ದಾಖಲೆಗಳ ಸಮಸ್ಯೆಗೆ ಪರಿಹಾರ ನೀಡಲು ‘ಭೂ ಗ್ಯಾರಂಟಿ’ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು 10,000 ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. ಐದು ಮುಖ್ಯ ಗ್ಯಾರಂಟಿ ಭರವಸೆಗಳನ್ನು ಈಡೇರಿಸಿರುವ ರೀತಿಯಲ್ಲೇ ಪ್ರಜಾಸೇವೆಯನ್ನು ಸರ್ಕಾರದ ಮುಖ್ಯ ಆದ್ಯತೆಯಾಗಿಸಿಕೊಂಡು ಆಡಳಿತವನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಪ್ರಕಟಿಸಿದರು.