ನವದೆಹಲಿ : ದೇಶದ ಮೊದಲ ಬುಲೆಟ್ ರೈಲು ಯೋಜನೆ ಆಕಾರ ಪಡೆಯುತ್ತಿದ್ದು, 2027ರ ಕೊನೆಯ ತ್ರೈಮಾಸಿಕದಲ್ಲಿ ಅಹಮದಾಬಾದ್ ಹಾಗೂ ಮುಂಬೈ ನಡುವೆ ಅಧಿಕೃತವಾಗಿ ಸೇವೆ ಆರಂಭಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ. ಒಟ್ಟು 508 ಕಿಲೋಮೀಟರ್ ಉದ್ದದ ಈ ಹೈಸ್ಪೀಡ್ ರೈಲು ಮಾರ್ಗದ ನಿರ್ಮಾಣ ಕಾರ್ಯಗಳು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಪೂರ್ಣ ವೇಗದಲ್ಲಿ ಚಲಿಸಿದಾಗ ಬುಲೆಟ್ ರೈಲು ಗಂಟೆಗೆ 320 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
ಮುಂಬೈನ ಹೃದಯಭಾಗವಾಗಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (BKC) ಏಕೈಕ ಭೂಗತ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಇದು 10 ಅಂತಸ್ತಿನ ಕಟ್ಟಡಕ್ಕಿಂತಲೂ ಆಳವಾಗಿದ್ದು, ಸುಮಾರು 32 ಮೀಟರ್ (100 ಅಡಿ) ಆಳದಲ್ಲಿ ಉತ್ಖನನ ನಡೆಸಲಾಗುತ್ತಿದೆ. ಭೂಮಿಯ ಆಳದಲ್ಲಿ ನಿರ್ಮಾಣವಾಗುತ್ತಿರುವ ಈ ತಾಣದಲ್ಲಿ ಪ್ಲಾಟ್‌ಫಾರ್ಮ್‌ಗಳು, ಕಾನ್ಕೋರ್ಸ್‌ಗಳು ಮತ್ತು ಸೇವಾ ಪ್ರದೇಶಗಳು ಸೇರಿ ಒಟ್ಟು ಮೂರು ಹಂತಗಳನ್ನು ನಿರ್ಮಿಸಲಾಗುತ್ತಿದೆ. ಇಲ್ಲಿ 400 ಮೀಟರ್‌ಗೂ ಹೆಚ್ಚು ಉದ್ದದ ಒಟ್ಟು 6 ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಈ ಹೈಸ್ಪೀಡ್ ಕಾರಿಡಾರ್‌ನಲ್ಲಿ ಒಟ್ಟು 21 ಕಿಲೋಮೀಟರ್ ಉದ್ದದ ಸುರಂಗಮಾರ್ಗ ಹಾದುಹೋಗಲಿದ್ದು, ಅದರಲ್ಲಿ 7 ಕಿಲೋಮೀಟರ್ ಭಾಗವು ಥಾಣೆ ಕ್ರೀಕ್‌ನಲ್ಲಿ ಸಮುದ್ರದ ಅಡಿಯಲ್ಲಿ ಸಾಗಲಿದೆ. ಇದು ದೇಶದ ಮೊದಲ ಸಾಗರಾಂತರ ಸುರಂಗ ಎನಿಸಿಕೊಳ್ಳಲಿದೆ. ಈ ಸುರಂಗ ಕೊರೆಯಲು 3,200 ಟನ್ ತೂಕದ ದೈತ್ಯ ಯಂತ್ರವು ಥಾಣೆ ಕ್ರೀಕ್‌ನ ಬಂಡೆಗಳನ್ನು ಕತ್ತರಿಸುತ್ತಿದ್ದು, ವಿಖ್ರೋಲಿ ಮತ್ತು ಸಾವ್ಲಿಯಿಂದ ಸುರಂಗ ಕೊರೆಯುವ ಯಂತ್ರಗಳನ್ನು (TBM) ಚಾಲನೆಗೊಳಿಸಲಾಗಿದೆ.
ಭಾರತದಲ್ಲಿ ಸ್ಥಾಪಿಸಲಾದ ಅತಿ ದೊಡ್ಡ ಯಂತ್ರಗಳಲ್ಲಿ ಒಂದಾಗಿರುವ ಪ್ರತಿಯೊಂದು TBM 13.6 ಮೀಟರ್ ವ್ಯಾಸದ ಕಟ್ಟರ್‌ಹೆಡ್ ಹೊಂದಿದ್ದು, ನಾಲ್ಕು ಅಂತಸ್ತಿನ ಕಟ್ಟಡದಷ್ಟು ಎತ್ತರವಾಗಿದೆ. 96 ಮೀಟರ್ ಉದ್ದವಿರುವ ಈ ಯಂತ್ರದ ತೂಕ 3,000 ಟನ್‌ಗಿಂತಲೂ ಹೆಚ್ಚಿದ್ದು, ಇದು ಸುಮಾರು 500 ಏಷ್ಯನ್ ಆನೆಗಳಿಗೆ ಸಮಾನವಾಗಿದೆ.