ಮೈಸೂರು :ದಸರಾ ಮಹೋತ್ಸವದ ಅಂಗವಾಗಿ ಈ ಬಾರಿ ಐತಿಹಾಸಿಕ ಕರಾವಳಿಯ ಕಂಬಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ರಾಜ್ಯದಾದ್ಯಂತ ಕಂಬಳದ ಸಂಸ್ಕೃತಿಯನ್ನು ಪಸರಿಸಲಾಗುತ್ತಿದೆ. ಕಂಬಳದ ಓಟಗಾರರಿಗೆ ಸೂಕ್ತ ವೈಜ್ಞಾನಿಕ ತರಬೇತಿ ನೀಡಿದರೆ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಾಧನೆ ಮಾಡಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ನಡೆದ ದಸರಾ ಕಂಬಳ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಂಬಳ ಕೇವಲ ಒಂದು ಕ್ರೀಡೆಯಲ್ಲ, ಅದೊಂದು ಶ್ರಮಿಕರ ಕ್ರೀಡೆ ಹಾಗೂ ಕರಾವಳಿ ಭಾಗದ ಜನರ ಸಾಂಸ್ಕೃತಿಕ ಹಬ್ಬವಾಗಿದೆ. ಕೃಷಿ ಮಣ್ಣಿನಲ್ಲಿ ಹುಟ್ಟಿದ ಈ ಪರಂಪರೆಯು ರೈತರ ಬದುಕು, ಮಳೆ, ಕೋಣಗಳ ಒಡನಾಟದ ಸಂಕೇತವಾಗಿದೆ. ಭಕ್ತಿಯ ಬೇರು ಮತ್ತು ಕೃಷಿಯ ತಳಹದಿಯ ಮೇಲೆ ನಿಂತಿರುವ ಈ ಸಂಸ್ಕೃತಿಯನ್ನು ಇಡೀ ರಾಜ್ಯಕ್ಕೆ ಪರಿಚಯಿಸುವ ಉದ್ದೇಶದಿಂದ ದಸರಾ ಮಹೋತ್ಸವದಲ್ಲಿ ಇದನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಹಿಂದೆ ವಿಜಯನಗರದ ಅರಸರು ಕೂಡ ಕರಾವಳಿ ಭಾಗದ ಕೋಣಗಳಿಗೆ ಗೌರವ ಅರ್ಪಿಸುತ್ತಿದ್ದರು. ಈ ಕುರಿತಾದ ಐತಿಹಾಸಿಕ ಹಿನ್ನೆಲೆ ಇರುವ ಪುಸ್ತಕವನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದರು. ಕಂಬಳದ ಕುರಿತು ಕೆಲವೊಮ್ಮೆ ಟೀಕೆಗಳು ಬಂದರೂ, ಟೀಕೆಗಳು ಸಾಯುತ್ತವೆ ಆದರೆ ಜನರ ಪರವಾದ ಕೆಲಸಗಳು ಎಂದೆಂದಿಗೂ ಉಳಿಯುತ್ತವೆ. ರಾಜ್ಯದ ಎಲ್ಲಾ ಸಂಸ್ಕೃತಿ ಮತ್ತು ಪರಂಪರೆಯನ್ನು ದಸರಾ ವೇದಿಕೆಯಲ್ಲಿ ಪರಿಚಯಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಂಬಳದ ಓಟದಲ್ಲಿ ಸ್ಪರ್ಧಿಗಳು ಕೆಲವೇ ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸುವುದನ್ನು ಉದಾಹರಿಸಿದ ಅವರು, ಕಂಬಳದ ಓಟಗಾರರು ಅತ್ಯಂತ ಕಷ್ಟಕರವಾದ ಗದ್ದೆಯ ಮಣ್ಣಿನಲ್ಲಿ ಅದ್ಭುತ ವೇಗವನ್ನು ಪ್ರದರ್ಶಿಸುತ್ತಾರೆ. ಒಲಿಂಪಿಕ್ಸ್ ಮತ್ತು ಅಥ್ಲೆಟಿಕ್ಸ್ ಓಟಗಳಲ್ಲಿ ವಿಶ್ವ ದಾಖಲೆ ಬರೆದ ದಿಗ್ಗಜರಂತೆ, ನಮ್ಮ ಕಂಬಳ ಓಟಗಾರರಿಗೆ ಆಧುನಿಕ ಮತ್ತು ವೈಜ್ಞಾನಿಕ ತರಬೇತಿಯನ್ನು ನೀಡಿದರೆ ಅಥ್ಲೆಟಿಕ್ಸ್‌ನಲ್ಲಿ ಇವರು ದೇಶಕ್ಕೆ ದೊಡ್ಡ ಮಟ್ಟದ ಪದಕಗಳನ್ನು ತಂದುಕೊಡಬಲ್ಲರು ಎಂಬ ದೃಢವಾದ ನಂಬಿಕೆ ತಮಗಿದೆ ಎಂದರು.
"ಒಂದೇ ನಾಡು ಹಲವು ಸಂಸ್ಕೃತಿ, ಒಂದೇ ಕನ್ನಡತನ ಅದುವೇ ಅಖಂಡ ಕರ್ನಾಟಕ" ಎಂಬ ಬಲವಾದ ಸಂದೇಶವನ್ನು ಕರಾವಳಿಯಿಂದ ಕಲ್ಯಾಣ ಕರ್ನಾಟಕ ಹಾಗೂ ಮೈಸೂರು ವರೆಗೆ ಸಾರಲಾಗುತ್ತಿದೆ. ನಮ್ಮ ಸರ್ಕಾರವು ಕಂಬಳ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಒಟ್ಟು 23 ಕಂಬಳ ಕೂಟಗಳಿಗೆ ತಲಾ 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತಿದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಮೈಸೂರು ದಸರಾ ವೀಕ್ಷಣೆ ಮಾಡಲು ಆಗಮಿಸುತ್ತಿದ್ದು, ಈ ಬಾರಿಯ ದಸರಾ ಸಂಭ್ರಮವನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಲು 'ರೀಲ್ಸ್' ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಮೈಸೂರು ದಸರಾ ಬಗ್ಗೆ ಅತ್ಯುತ್ತಮ ರೀಲ್ಸ್ ಮಾಡಿ ಅಧಿಕೃತ ಮೈಸೂರು ದಸರಾ ಪೇಜ್‌ಗೆ (mysoredasara.2026) ಟ್ಯಾಗ್ ಮಾಡಬಹುದು. ಇವುಗಳಲ್ಲಿ ಅತ್ಯುತ್ತಮವಾಗಿ ಮೂಡಿಬಂದ 100 ರೀಲ್ಸ್ ಗಳನ್ನು ಆಯ್ಕೆ ಮಾಡಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಿಸಿದರು.
ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರಾವಳಿ ಭಾಗದಿಂದ ಸುಮಾರು 3 ಸಾವಿರಕ್ಕೂ ಅಧಿಕ ಜನರು ಬಂದು ಕಂಬಳ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು, ಇಡೀ ಕರಾವಳಿ ಸಂಸ್ಕೃತಿಯು ಮೈಸೂರಿನ ಅಂಗಳದಲ್ಲಿ ರಂಗೇರುವಂತೆ ಮಾಡಿದೆ. ದಸರಾದಲ್ಲಿ ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ನಾಡಿನ ವಿವಿಧ ಕಲೆಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.