ಚೆನ್ನೈ: ಚುನಾವಣಾ ಆಯೋಗವು ಸ್ಪಂದಿಸದೇ ಇದ್ದಾಗ ಮತ್ತು ಪ್ರಧಾನಮಂತ್ರಿಯವರು ಸಮಸ್ಯೆ ಆಲಿಸಬೇಕಿದ್ದ ಸಂದರ್ಭದಲ್ಲಿ ಅದು ನಡೆಯದಿದ್ದಾಗ, ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡದೆ ನಮಗೆ ಬೇರೆ ದಾರಿಯಿಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯ ನ್ಯಾಯಮೂರ್ತಿಗಳು ದೇಶದ ಜನರ ಧ್ವನಿಯನ್ನು ಆಲಿಸಬೇಕು. ಚುನಾವಣಾ ಆಯೋಗವು ಸ್ಪಂದಿಸಲು ವಿಫಲವಾದಾಗ ಪ್ರಧಾನಮಂತ್ರಿಗಳು ಕರೆದು ಸಮಸ್ಯೆ ಏನು ಎಂದು ಕೇಳಬೇಕಿತ್ತು. ಇಂತಹ ಅನಿವಾರ್ಯ ಪರಿಸ್ಥಿತಿಯಲ್ಲಿ ಮುಖ್ಯ ನ್ಯಾಯಾಧೀಶರನ್ನು ಭೇಟಿ ಮಾಡಬೇಕಾಯಿತು ಎಂದು ತಿಳಿಸಿದರು.
ಇಂಡಿಯಾ ಮೈತ್ರಿಕೂಟದ ಭೇಟಿಗೆ ಮುಖ್ಯ ನ್ಯಾಯಮೂರ್ತಿಗಳು ಅವಕಾಶ ನಿರಾಕರಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಸಾರ್ವಜನಿಕ ಜೀವನದಲ್ಲಿ ನಾವು ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ದೇಶದ ಪ್ರಜಾಪ್ರಭುತ್ವ ಹಾಗೂ ದೇಶದ ಎಲ್ಲಾ ನಾಗರಿಕರ ಮತದಾನದ ಹಕ್ಕಿನ ರಕ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ" ಎಂದರು.
ಮತದಾನದ ಹಕ್ಕು ನಮ್ಮ ಬದುಕಿನ ಹಕ್ಕಾಗಿದೆ, ಅದೇ ನಮ್ಮ ಬದುಕು. ವಿರೋಧ ಪಕ್ಷದ ನಾಯಕರು ದೇಶದ ಜನರ ಧ್ವನಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಬೇಕಾದರೂ ಆಗಬಹುದು ಎಂದು ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.