ಸರ್ವ ಧರ್ಮ ಸಮನ್ವಯ ಜಿಲ್ಲೆಯ ವೈಶಿಷ್ಟ್ಯ. ಅದನ್ನು ಪುನಃಸ್ಥಾಪನೆ ಮಾಡಲು ಪ್ರಯತ್ನಿಸೋಣ
ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು ಕುದ್ರೋಳಿ ಗೋಕರ್ಣ ನಾಥ ಕ್ಷೇತ್ರದಿಂದ ಭಾರಿ ಮೆರವಣಿಗೆಯಲ್ಲಿ ಸಾಗಿ ಇಂದು ನಾಮಪತ್ರ ಸಲ್ಲಿಸಿದರು.
ಮಂಗಳೂರು: ಪದ್ಮರಾಜ್ ಅವರು ಕುದ್ರೋಳಿ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಅವರ ಜೊತೆ ಗೋಕರ್ಣನಾಥ ದೇವರು, ಪರಿವಾರ ದೇವರಿಗೆ ಹಾಗೂ ನಾರಾಯಣ ಗುರುಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಮುನ್ನ ಹಮ್ಮಿಕೊಂಡ ಮೆರವಣಿಗೆಗೆ ಜನಾರ್ದನ ಪೂಜಾರಿ ಚಾಲನೆ ನೀಡಿದರು. ಗಾರುಡಿ ಗೊಂಬೆ ಬಳಗ, ಚೆಂಡೆವಾದನ, ಕೊಂಬು ಕಹಳೆಗಳು ಮೆರವಣಿಗೆ ಗೆ ಮೆರುಗು ನೀಡಿದವು. ಕಾಂಗ್ರೆಸ್ ಧ್ವಜ ಹಿಡಿದು ಜಯಘೋಷ ಕೂಗುತ್ತಾ ಕಾರ್ಯಕರ್ತರು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಧ್ವಜಗಳ ಜೊತೆ ತುಳುನಾಡ ಧ್ವಜವೂ ರಾರಾಜಿಸುತ್ತಿತ್ತು. ತೆರೆದ ವಾಹನದಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್., ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಢಾರಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಚುನಾವಣಾ ಸಮಿತಿ ಅಧ್ಯಕ್ಷ ಬಿ.ರಮಾನಾಥ ರೈ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಇನಾಯತ್ ಅಲಿ ಮೊದಲಾದವರು ಭಾಗವಹಿಸಿದ್ದರು. ನಾಮಪತ್ರ ಸಲ್ಲಿಕೆಯ ನಂತರ ಅಭ್ಯರ್ಥಿ ಪದ್ಮರಾಜ್ ಮಾತನಾಡಿ, ಕಾರ್ಯಕರ್ತರ ಕಷ್ಟಗಳ ಅರಿವು ನನಗಿದೆ. ಗೆದ್ದ ಬಳಿಕ 60 ತಿಂಗಳ ಕಾಲ ನಿಮ್ಮ ಜೊತೆಗೇ ಇದ್ದು ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ. ಕಾಂಗ್ರೇಸ್ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನೇ ಮುಂದಿಟ್ಟು ಮತಯಾಚಿಸೋಣ. ಸರ್ವ ಧರ್ಮ ಸಮನ್ವಯ ಜಿಲ್ಲೆಯ ವೈಶಿಷ್ಟ್ಯ. ಅದನ್ನು ಪುನಃಸ್ಥಾಪನೆ ಮಾಡಲು ಪ್ರಯತ್ನಿಸೋಣ ಎಂದು ಎಂದರು.