image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರ ಹಕ್ಕು ಕಸಿದುಕೊಳ್ಳುವ ದೊಡ್ಡ ಹುನ್ನಾರ: ನಟ ಪ್ರಕಾಶ್ ರಾಜ್ ಗಂಭೀರ ಆರೋಪ

ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರ ಹಕ್ಕು ಕಸಿದುಕೊಳ್ಳುವ ದೊಡ್ಡ ಹುನ್ನಾರ: ನಟ ಪ್ರಕಾಶ್ ರಾಜ್ ಗಂಭೀರ ಆರೋಪ

ಬೆಂಗಳೂರು: ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿ ಜಾರಿಗೆ ತರಲು ಹೊರಟಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision - SIR) ಪ್ರಕ್ರಿಯೆ ಮತ್ತು ಚುನಾವಣಾ ಆಯೋಗದ ವಿವಾದಾತ್ಮಕ ಧೋರಣೆಗಳ ವಿರುದ್ಧ ಖ್ಯಾತ ನಟ ಹಾಗೂ ಕಾರ್ಯಕರ್ತ ಪ್ರಕಾಶ್ ರಾಜ್ ತೀವ್ರವಾಗಿ ಕಿಡಿಕಾರಿದ್ದಾರೆ. ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂವಿಧಾನಿಕ ಸಂಸ್ಥೆಗಳು ನಡೆದುಕೊಳ್ಳುತ್ತಿರುವ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಲ್ಲ, ಬದಲಾಗಿ ಅರ್ಹ ಮತದಾರರ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುವ ದೊಡ್ಡ ಹುನ್ನಾರ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳ, ಬಿಹಾರ ಮತ್ತು ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಎಸ್‌ಐಆರ್ ನೆಪದಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಬದುಕಿರುವವರನ್ನು 'ಮೃತರು' (Dead) ಎಂದು, ವಿಳಾಸ ಬದಲಾಯಿಸಿದವರನ್ನು 'ಸ್ಥಳಾಂತರಿತರು' (Shifted) ಎಂದು ಬಿಂಬಿಸಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. 2023ರಲ್ಲಿ ಚುನಾವಣಾ ಆಯೋಗದ ನೇಮಕಾತಿ ನಿಯಮಗಳನ್ನು ಬದಲಾಯಿಸಿ, ಆಯೋಗದ ಅಧಿಕಾರಿಗಳಿಗೆ ಜುಡಿಷಿಯಲ್ ಇಮ್ಯೂನಿಟಿ (ನ್ಯಾಯಾಂಗ ವಿನಾಯಿತಿ) ಕಲ್ಪಿಸಲಾಗಿದೆ. ಪ್ರಜೆಗಳು ತಮ್ಮ ತಪ್ಪುಗಳನ್ನು ಪ್ರಶ್ನಿಸಬಾರದು ಮತ್ತು ಯಾವುದೇ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಬೇಕು ಎಂಬ ದುರುದ್ದೇಶದಿಂದಲೇ ಈ ರಕ್ಷಣೆ ನೀಡಲಾಗಿದೆ ಎಂದು ಅವರು ದೂರಿದರು.

ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು, ಆಳುವ ಸರ್ಕಾರದ ಸಚಿವರನ್ನು ಸೇರಿಸಿಕೊಂಡಿರುವುದು ಆಯೋಗದ ಸ್ವಾಯತ್ತತೆ ಹಾಗೂ ಪಾರದರ್ಶಕತೆಗೆ ದೊಡ್ಡ ಪೆಟ್ಟು ನೀಡಿದೆ ಎಂದು ಟೀಕಿಸಿದರು. ರಾಜ್ಯದ ವಿವಿಧ ಬೂತ್‌ಗಳಲ್ಲಿ ಸಾಮಾಜಿಕ ಆಡಿಟ್ (Social Audit) ನಡೆಸಲಾಗುತ್ತಿದ್ದು, ಸಂತ್ರಸ್ತರ ದಾಖಲೆಗಳ ಸಮೇತ ಸತ್ಯಾಂಶವನ್ನು ಜನರ ಮುಂದಿಡಲಾಗುತ್ತಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿಯೂ ರಾಷ್ಟ್ರಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದ ಅವರು, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ನವೆಂಬರ್‌ನಲ್ಲಿ ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಎಲ್ಲಾ ವಿರೋಧ ಪಕ್ಷದ ನಾಯಕರು ಒಟ್ಟಾಗಿ ಮಹಾಭಿಯೋಗ (Impeachment) ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.

"ಐದು ವರ್ಷಕ್ಕೆ ಒಂದು ಸಲ ಭಾರತ ದೇಶದ ಮತದಾರರ ಹತ್ತಿರ ಬಂದು ಕಾಲಿಗೆ ಬಿದ್ದು ವೋಟ್ ಹಾಕಿ ಅಂತ ಕೇಳುವ ನೀವು, ಅದೇ ಮತದಾರರನ್ನು ನಿಮ್ಮ ಕಚೇರಿಗಳ ಮುಂದೆ ಬಂದು ನಮ್ಮ ವೋಟ್ ಉಳಿಸಿ ಅಂತ ಅಲೆಯುವ ಪರಿಸ್ಥಿತಿ ತಂದಿಟ್ಟಿದ್ದೀರಿ. ಪಶ್ಚಿಮ ಬಂಗಾಳದಲ್ಲಿ ಆದದ್ದು ಕರ್ನಾಟಕದಲ್ಲಿ ಆಗಲು ನಾವು ಬಿಡುವುದಿಲ್ಲ. ಕೂಡಲೇ ಎಸ್‌ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ," ಎಂದು ಪ್ರಕಾಶ್ ರಾಜ್ ಎಚ್ಚರಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ