image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆ, ಮತಗಳ್ಳತನದ ಪಾಲುದಾರ: ಸಿಎಂ ಡಿ.ಕೆ. ಶಿವಕುಮಾರ್‌ ವಾಗ್ದಾಳಿ

ಚುನಾವಣಾ ಆಯೋಗ ಬಿಜೆಪಿಯ ಕೈಗೊಂಬೆ, ಮತಗಳ್ಳತನದ ಪಾಲುದಾರ: ಸಿಎಂ ಡಿ.ಕೆ. ಶಿವಕುಮಾರ್‌ ವಾಗ್ದಾಳಿ

ಬೆಂಗಳೂರು:ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಹಾಗೂ ಬಿಜೆಪಿಯ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಬಡವರು ಹಾಗೂ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸುವವರ ಮತಗಳನ್ನು ಗುರಿಯಾಗಿಸಿಕೊಂಡು ಮತಗಳ್ಳತನಕ್ಕೆ ಪಾಲುದಾರರಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟುವಾಗಿ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೆಪಿಸಿಸಿ ವತಿಯಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆ ಆಗ್ರಹಿಸಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಸಂವಿಧಾನವು ಚುನಾವಣಾ ಆಯೋಗಕ್ಕೆ ಸಂಪೂರ್ಣ ಸ್ವಾಯತ್ತತೆಯನ್ನು ನೀಡಿತ್ತು. ಆದರೆ, ಪ್ರಸ್ತುತ ಆ ವ್ಯವಸ್ಥೆಯನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಇದಕ್ಕೆ ಸ್ಪಷ್ಟ ಸಾಕ್ಷಿಗಳು ಲಭ್ಯವಿವೆ. ಕೂಡಲೇ ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಮುಖ್ಯ ಚುನಾವಣಾ ಆಯುಕ್ತರನ್ನು ಬಂಧಿಸಬೇಕು ಮತ್ತು ಇತ್ತೀಚೆಗೆ ಅಕ್ರಮವಾಗಿ ನಡೆದಿರುವ ಎಲ್ಲ ಚುನಾವಣೆಗಳನ್ನು ರದ್ದುಪಡಿಸಬೇಕು ಎಂದು ಸಿಎಂ ಆಗ್ರಹಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, "ನೀವು 'ಚೀಫ್ ಎಲೆಕ್ಷನ್‌ ಕಮಿಷನರ್‌' ಅಲ್ಲ, ಬದಲಿಗೆ 'ಚೀಫ್ ಸೆಲೆಕ್ಷನ್‌ ಕಮಿಷನರ್‌' ರೀತಿಯಲ್ಲಿ ವರ್ತಿಸುತ್ತಿದ್ದೀರಿ. ನಿಮ್ಮ ಈ ಅನ್ಯಾಯ ಹಾಗೂ ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ವಿರುದ್ಧ ಜನತೆ ದಂಗೆ ಎಳಲಿದ್ದಾರೆ. ಕೇಂದ್ರ ಸರ್ಕಾರ ತಕ್ಷಣವೇ ಸಂಸತ್ತಿನ ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಗಂಭೀರ ಚರ್ಚೆ ನಡೆಸಬೇಕು. ಅಧಿಕಾರದ ಮದ ಹಾಗೂ ವ್ಯಾಮೋಹ ಎಂದೆಂದಿಗೂ ಶಾಶ್ವತವಾಗಿರುವುದಿಲ್ಲ. ಹುಟ್ಟಿದ ಸೂರ್ಯ ಮುಳುಗಲೇಬೇಕು. ಈಗ ನಡೆದಿರುವ ಎಸ್‌ಐಆರ್ (SIR) ಪ್ರಕ್ರಿಯೆ ಸಂಪೂರ್ಣವಾಗಿ ರದ್ದುಗೊಂಡು, ಹೊಸದಾಗಿ ಮರುಪರಿಶೀಲನೆ ನಡೆಯಬೇಕು" ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದ ಡಿ.ಕೆ. ಶಿವಕುಮಾರ್, ತಮ್ಮ ಕೈಗೊಂಬೆಯಾಗಿ ವರ್ತಿಸಬಲ್ಲವರನ್ನು ಮಾತ್ರ ಚುನಾವಣಾ ಆಯೋಗಕ್ಕೆ ನೇಮಕ ಮಾಡಲಾಗಿದೆ ಎಂದು ಟೀಕಿಸಿದರು.

ಕರ್ನಾಟಕದ ಒಟ್ಟು ಜನಸಂಖ್ಯೆ 7 ಕೋಟಿ ಇದ್ದು, ಇದರಲ್ಲಿ 5.54 ಕೋಟಿ ಮತದಾರರಿದ್ದಾರೆ. ಆದರೆ, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ ಈ ಸಂಖ್ಯೆಯನ್ನು ಬಲವಂತವಾಗಿ 4.46 ಕೋಟಿಗೆ ಇಳಿಸಲಾಗಿದೆ. ಸುಮಾರು 30 ರಿಂದ 40 ಲಕ್ಷ ಮತದಾರರಿಗೆ ಅನಗತ್ಯವಾಗಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಇದರ ಅಂತಿಮ ತೀರ್ಮಾನವನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಗೂ ಸಂವಿಧಾನ ನೀಡಿರುವ ಅತ್ಯಮೂಲ್ಯ ಹಾಗೂ ಅತಿ ದೊಡ್ಡ ಹಕ್ಕು ಮತದಾನವಾಗಿದೆ. ಪ್ರಜಾಪ್ರಭುತ್ವದ ಮೂಲ ಬೇರಾದ ಮತದಾನದ ಹಕ್ಕನ್ನು ಕಸಿದುಕೊಳ್ಳಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮನ್ಸೂರ್ ಖಾನ್ ಅವರು ಚುನಾವಣಾ ಆಯೋಗದ ದೋಷಪೂರಿತ ಅಧಿಕೃತ ಮಾಹಿತಿಯ ಪ್ರಕಾರ ಕೇವಲ 31 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಆದರೆ, ಈಗ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಬರೋಬ್ಬರಿ 12 ಲಕ್ಷ ಮತಗಳು ಕಡಿತಗೊಂಡಿವೆ. ಇದಕ್ಕೆ ಬಿಜೆಪಿ ನಾಯಕರು ಕನ್ನಡಿಗರಿಗೆ ಉತ್ತರಿಸಬೇಕೆಂದು ಸವಾಲು ಹಾಕಿದರು. ಮಹದೇವಪುರ ವಿಧಾನಸಭಾ ಕ್ಷೇತ್ರವೊಂದರಲ್ಲೇ 3 ಲಕ್ಷ ಮತಗಳು ನಾಪತ್ತೆಯಾಗಿವೆ. ಬಿಜೆಪಿಯ ಇಂತಹ ವ್ಯವಸ್ಥಿತ ದುಷ್ಕೃತ್ಯಗಳಿಂದಾಗಿ ಜನಸಾಮಾನ್ಯರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿದ್ದ ನಂಬಿಕೆಯೇ ಹೊರಟುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸಾರ್ವಜನಿಕರ ಪರವಾಗಿ ದೃಢವಾದ ಹೋರಾಟವನ್ನು ಮುಂದುವರಿಸಿದೆ ಎಂದರು.

ಮುಂಬರುವ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇಳೆಗೆ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲಾಗುವುದು. ಈ ಚುನಾವಣೆಯಲ್ಲಿ ಯಾವುದೇ ಇವಿಎಂ ದೋಷಗಳಿಗೆ ಅವಕಾಶವಿಲ್ಲದಂತೆ ಕಾಗದದ ಮತಪತ್ರಗಳನ್ನು (ಬ್ಯಾಲೆಟ್ ಪೇಪರ್) ಬಳಸುವ ಬಗ್ಗೆ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಬಲಿಷ್ಠವಾದ ಹಾಗೂ ಪಾರದರ್ಶಕ ಚುನಾವಣಾ ವ್ಯವಸ್ಥೆಯನ್ನು ಮರುಸ್ಥಾಪಿಸಲು ಈ ಹೋರಾಟ ನಡೆಯುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಎಸ್‌ಐಆರ್ ವಿರೋಧಿ ಹೋರಾಟವನ್ನು ರಾಜ್ಯದ ಪ್ರತಿ ಹಳ್ಳಿಗೂ ತಲುಪಿಸಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ದೇಶದ ಪ್ರಜೆಗಳಿಗೆ ಸಂವಿಧಾನದ ಮೂಲಕ ಅತಿ ದೊಡ್ಡ ಅವಕಾಶಗಳನ್ನು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯಂತಹ ಹೆಮ್ಮೆಯ ಕೊಡುಗೆಗಳನ್ನು ನೀಡಿದೆ. ಇಂದು ಇಡೀ ಜಗತ್ತು ಭಾರತದ ಪ್ರಜಾಪ್ರಭುತ್ವ ಮಾದರಿಯನ್ನು ನೋಡಿ ಮೆಚ್ಚಿ ಅನುಕರಿಸುತ್ತಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಅತ್ಯುನ್ನತ ಮಾದರಿ ವ್ಯವಸ್ಥೆಯ ಮೇಲೆಯೇ ವಿಶ್ವದ ಇತರೆ ರಾಷ್ಟ್ರಗಳು ಅನುಮಾನ ಪಡುವಂತಹ ದುಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮತಗಳ್ಳತನ ಹಾಗೂ ಅಕ್ರಮಗಳ ವಿರುದ್ಧ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಹಿರಿಯ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಈ ನೆಲದಿಂದಲೇ ಧೈರ್ಯವಾಗಿ ಹೋರಾಟವನ್ನು ಆರಂಭಿಸಿದ್ದರು. ಪಕ್ಷದ ಪ್ರತಿಯೊಬ್ಬ ಬೂತ್ ಮಟ್ಟದ ಹಿರಿಯ ನಾಯಕರು ಹಾಗೂ ಬಿಎಲ್‌ಎ-2 (BLA-2) ಕಾರ್ಯಕರ್ತರು ಎಚ್ಚೆತ್ತುಕೊಂಡು ಇದರ ವಿರುದ್ಧ ಬಲವಾದ ಹೋರಾಟವನ್ನು ರೂಪಿಸಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

Category
ಕರಾವಳಿ ತರಂಗಿಣಿ