ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆರ್ಥಿಕ ದಿವಾಳಿತನ, ಸಾಲದ ಹೊರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಘೋಷಿಸಿರುವ ಅನುದಾನಗಳು ಕೇವಲ ಕಾಗದದಲ್ಲೇ ಉಳಿಯಲಿವೆ ಎಂದು ಆರೋಪಿಸಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರಮುಖ ಮುಖಂಡರು ಮತ್ತು ಶಾಸಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, "ರಾಜ್ಯ ಸರ್ಕಾರವು ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಿ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಘೋಷಣೆಗಳನ್ನು ಮಾಡಿದೆ. ಆದರೆ, ಸಭೆಗೂ ಮುಂಚಿತವಾಗಿ ಅಂದರೆ ಸೆಪ್ಟೆಂಬರ್ 17 ರಂದೇ ಸರ್ಕಾರದ ಆರ್ಥಿಕ ಇಲಾಖೆಯು ಮುಖ್ಯಮಂತ್ರಿಗೆ ಅಧಿಕೃತ ಪತ್ರ ಬರೆದು, ಬಜೆಟ್‌ನಲ್ಲಿ ಯಾವುದೇ ಅನುದಾನ ಮೀಸಲಿಡದ ಕಾರಣ ಬಾಯಿಗೆ ಬಂದಂತೆ ದೊಡ್ಡ ಮೊತ್ತದ ಘೋಷಣೆಗಳನ್ನು ಮಾಡಬೇಡಿ ಎಂದು ಎಚ್ಚರಿಸಿದೆ. ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದು, ಗ್ಯಾರಂಟಿ ಯೋಜನೆಗಳ ನಿರ್ವಹಣೆಗೇ ಹಣವಿಲ್ಲದೆ ಸರ್ಕಾರ ಪರದಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಅವರು, "ಕಳೆದ 70 ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು ಆದ ಸಾಲ ಸುಮಾರು 2 ಲಕ್ಷ ಕೋಟಿ ರೂ.ಗಳಷ್ಟಿದ್ದರೆ, ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಸಾಲದ ಪ್ರಮಾಣ ಗಗನಕ್ಕೇರಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಿಗೆ ಹೊಸ ಯೋಜನೆಗಳ ಆಸೆ ತೋರಿಸಿ ಕಿವಿಯಲ್ಲಿ ಹೂವು ಇಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಘೋಷಿಸಲಾದ ಅನುದಾನಗಳನ್ನೇ ಬಿಡುಗಡೆ ಮಾಡದವರು, ಈಗ ಹೊಸದಾಗಿ ಘೋಷಣೆ ಮಾಡಿರುವುದನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆ? ಕೂಡಲೇ ಸರ್ಕಾರ ತನ್ನ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಬೇಕು" ಎಂದು ಒತ್ತಾಯಿಸಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಆಡಳಿತ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡರು. "ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ನೀಡುತ್ತಿದ್ದ ಮಾಸಾಶನವನ್ನು ಕಟ್ ಮಾಡಲಾಗುತ್ತಿದೆ. ಜನನ-ಮರಣ ಪ್ರಮಾಣಪತ್ರದ ಶುಲ್ಕವನ್ನು ಏಕಾಏಕಿ ಹೆಚ್ಚಿಸಲಾಗಿದೆ. ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರಿಗೆ ಹಣವಿಲ್ಲ, ಅಂಗನವಾಡಿ ಸಿಬ್ಬಂದಿಗೆ ಸರಿಯಾಗಿ ಅನುದಾನ ಸಿಗುತ್ತಿಲ್ಲ. ಗೃಹಲಕ್ಷ್ಮಿ ಯೋಜನೆಯ ಹಣವೂ ತಿಂಗಟ್ಟಲೆ ಬಾಕಿ ಇದೆ. ಇನ್ನು ಮಹಾನಗರ ಪಾಲಿಕೆ, ಜಿ.ಪಂ., ತಾ.ಪಂ.ಗಳ ಆಡಳಿತ ನಡೆಸಲು ಸ್ಥಳೀಯ ಸಂಸ್ಥೆಗಳಲ್ಲಿ ಹಣವಿಲ್ಲದೆ ಸಿಬ್ಬಂದಿಗೆ ಸಂಬಳ ಕೊಡದಂತ ದಯನೀಯ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಕಿಡಿಕಾರಿದರು.
ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, "ಮಂಗಳೂರಿಗೆ ಬಂದು ದೊಡ್ಡ ದೊಡ್ಡ ಮೊತ್ತದ ಯೋಜನೆಗಳನ್ನು ಘೋಷಣೆ ಮಾಡಿರುವ ಮುಖ್ಯಮಂತ್ರಿಗಳು ಹಾಗೂ ಸಚಿವರು ಮೊದಲು ರಾಜ್ಯದ ಬೊಜೆಯ ನೈಜ ಸ್ಥಿತಿಯನ್ನು ತಿಳಿಸಲಿ. ಆರ್ಥಿಕ ಇಲಾಖೆಯ ಎಚ್ಚರಿಕೆಯ ನಡುವೆಯೂ ಬೋಗಸ್ ಘೋಷಣೆಗಳನ್ನು ಮಾಡುತ್ತಾ ಜನರನ್ನು ಮರಳು ಮಾಡಲಾಗುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಸ್ತಬ್ಧಗೊಂಡಿದ್ದು, ಕೇವಲ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ಜನವಿರೋಧಿ ನೀತಿಯನ್ನು ಹಾಗೂ ಘೋಷಣೆಗಳ ವಂಚನೆಯನ್ನು ಜನತೆಯ ಮುಂದೆ ಎಳೆಎಳೆಯಾಗಿ ಬಿಚ್ಚಿಡಲಿದ್ದೇವೆ. ಮುಂಬರುವ ದಿನಗಳಲ್ಲಿ ಪಕ್ಷವು ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ" ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಾಲಕೃಷ್ಣ ಭಟ್ ಹಾಗೂ ಮೋನಪ್ಪ ಭಂಡಾರಿ, ಸುಲೋಚನಾ ಭಟ್, ಪುಲಸ್ಯ ರೈ, ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ದಯಾನಂದ ಉಜಿರೆಮಾರ್, ಚನ್ನಪ್ಪ ಕೊಟ್ಯಾನ್, ದಿನೇಶ್ ಪುತ್ರನ್, ಜಗದೀಶ್ ಆಳ್ವಾ, ರಮೇಶ್ ಕಂಡೆಟ್ಟು, ರಾಜೇಶ್ ಕೊಟ್ಟಾರಿ, ನಂದನ್ ಮಲ್ಯ, ಜೈಸಿಲ್ ಡಿಸೋಜಾ, ದಿನೇಶ್ ಅಮ್ಟೂರು, ಜಯಂತಿ ನಾಯ್ಕ್, ಚಂದ್ರಶೇಖರ ಬಪ್ಪಳಿಗೆ, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ಅರುಣ್ ಜಿ. ಶೇಟ್, ಡಾ ಮಂಜುಳಾ ಅನಿಲ್ ರಾವ್, ರಾಜಗೋಪಾಲ್ ರೈ, ಪೂಜಾ ಪೈ, ಕವಿತಾ ಸನಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡಿಂಜಿ, ಪ್ರಸನ್ನ ಕುಮಾರ್ ಮಾರ್ತಾ, ಧನಲಕ್ಷ್ಮಿ ಗಟ್ಟಿ, ಪೂರ್ಣಿಮಾ, ಶೋಭೇಂದ್ರ ಸಸಿಹಿತ್ಲು, ಸುಜಿತ್ ಪ್ರತಾಪ್ ,ಸುಧೀರ್ ಕುಮಾರ್ ಶೆಟ್ಟಿ, ಪ್ರಸನ್ನ ದರ್ಬೆ, ಕದ್ರಿ ಮನೋಹರ್ ಶೆಟ್ಟಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರು ಮೊದಲಾದವರು ಉಪಸ್ಥಿತರಿದ್ದರು.