ಮಂಗಳವಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‍ಜಿಟಿ) ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮುಖ್ಯಮಂತ್ರಿಗಳು ಈ ವಿಷಯ ತಿಳಿಸಿದರು.
"ನನಗಿರುವ ಮಾಹಿತಿಯ ಪ್ರಕಾರ, ಕಸ್ತೂರಿ ರಂಗನ್ ವರದಿ ಜಾರಿಯ ಹಿನ್ನೆಲೆಯಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಅಧಿಸೂಚನೆ ಹೊರಡಿಸಿದ ಬಳಿಕ ಆ ಬಗ್ಗೆ ತನ್ನ ಗಮನಕ್ಕೆ ತರುವಂತೆಯೂ ಸೂಚಿಸಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಪಶ್ಚಿಮಘಟ್ಟವನ್ನು ಹಂಚಿಕೊಂಡಿರುವ ರಾಜ್ಯಗಳ ವಾಸ್ತವ ಪರಿಸ್ಥಿತಿಯ ಬಗ್ಗೆ ಮಂಡಳಿಯು ಯಾವುದೇ ಪ್ರಸ್ತಾಪ ಮಾಡಿಲ್ಲ" ಎಂದು ಅವರು ವಿವರಿಸಿದರು.
"ಹಾಗಂತ ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮಘಟ್ಟದ ಪರಿಸರ ಸೂಕ್ಷ್ಮ ಪ್ರದೇಶಗಳ ರಕ್ಷಣೆಗಾಗಿ ನೀಡಿರುವ ಶಿಫಾರಸುಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತಿಲ್ಲ ಅಥವಾ ಅಗೌರವಿಸುತ್ತಿಲ್ಲ. ಬದಲಾಗಿ, ಆ ಶಿಫಾರಸುಗಳನ್ನು ನಮ್ಮ ರಾಜ್ಯದ ರೈತರು ಹಾಗೂ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ವೈಜ್ಞಾನಿಕವಾದ ಹಾದಿಯಲ್ಲಿ ಪರಿಷ್ಕರಿಸಿ ಜಾರಿಗೆ ತರಬೇಕು ಎಂದು ನಾವು ಮನವಿ ಮಾಡುತ್ತಿದ್ದೇವೆ" ಎಂದರು.
ಮುಂದುವರಿದು ಮಾತನಾಡಿದ ಅವರು, "ಕೇವಲ ಡ್ರೋಣ್ ಸರ್ವೇ ಮಾಡಿಸಿದರೆ ಎಲ್ಲವೂ ಕೇವಲ ಹಸಿರಾಗಿಯೇ ಕಾಣುತ್ತದೆ ಎಂಬ ಅಭಿಪ್ರಾಯ ಸದನದಲ್ಲಿ ವ್ಯಕ್ತವಾಗಿದೆ. ಆದ್ದರಿಂದ ಕೇವಲ ಉಪಗ್ರಹ ಅಥವಾ ಡ್ರೋಣ್ ಸಮೀಕ್ಷೆ ಮಾತ್ರವಲ್ಲದೆ, ಕೃಷಿ ಮತ್ತು ವಸತಿ ಪ್ರದೇಶಗಳ ವಾಸ್ತವಿಕತೆ ತಿಳಿಯಲು ಕಂದಾಯ ಇಲಾಖೆಯ ಮೂಲಕ ಸರಿಯಾದ ಸರ್ವೇ ಮಾಡಿಸಬೇಕಾಗುತ್ತದೆ" ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.