ಮಂಗಳೂರು: ಮೊದಲ ಬಡರಿಗೆ ಕರಾವಳಿಯಲ್ಲಿ ನಡೆದ ರಾಜ್ಯ ಸಚಿವ ಸಂಪುಟದ 21ನೇ ಸಭೆಯಲ್ಲಿ ಕರಾವಳಿ ಮತ್ತು ಮಲೆನಾಡು ಭಾಗ ಸೇರಿದಂತೆ ಇಡೀ ರಾಜ್ಯದ ಅಭಿವೃದ್ಧಿಗೆ ಪೂರಕವಾಗುವಂತೆ ಬರೋಬ್ಬರಿ ₹32,611 ಕೋಟಿ ಮೊತ್ತದ 61 ಪ್ರಮುಖ ವಿಷಯಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ಅತ್ಯಂತ ಐತಿಹಾಸಿಕ ಸಂಪುಟ ಸಭೆಯಾಗಿದ್ದು, ಕರಾವಳಿ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಮಂಗಳೂರಿನ ಗುರುಪುರ ನದಿ ದ್ವೀಪಗಳ ಅಭಿವೃದ್ಧಿಗೆ ₹125 ಕೋಟಿ, ಉತ್ತರ ಕನ್ನಡದ ಕಾರವಾರ, ಭಟ್ಕಳ ಹಾಗೂ ಅಂಕೋಲಾದ 7 ದ್ವೀಪಗಳ ಅಭಿವೃದ್ಧಿಗೆ ₹307 ಕೋಟಿ ಮತ್ತು ಉಡುಪಿಯ ದರಿಯಾ, ಬಹದ್ದೂರ್‌ಗಡ್ ಹಾಗೂ ಮಲ್ಪೆಯಲ್ಲಿ ಎಕೋ ಟೂರಿಸಂ ಕೇಂದ್ರಗಳ ನಿರ್ಮಾಣಕ್ಕೆ ₹279 ಕೋಟಿ ಅನುದಾನವನ್ನು ಪಿಪಿಪಿ ಮಾದರಿಯಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರೊಂದಿಗೆ 'ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ 2026'ಕ್ಕೆ ಅಂಕಿತ ಬಿದ್ದಿದ್ದು, ಕದ್ರಿಯಲ್ಲಿ ಕೈಗೆತ್ತಿಕೊಳ್ಳಲಿರುವ 'ಮಂಗಳೂರು ಐ' ಹಾಗೂ 9 ವಿಭಿನ್ನ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಅಭಿವೃದ್ಧಿಗೆ ಹಸಿರುನಿಶಾನೆ ತೋರಿಸಲಾಗಿದೆ ಎಂದರು.
ಉತ್ತರ ಕನ್ನಡದ ಮಂಕಿ ಬಂದರಿನಲ್ಲಿ ₹6,925 ಕೋಟಿ ವೆಚ್ಚದ ಬಹುಪಯೋಗಿ ಹಾರ್ಬರ್ ಹಾಗೂ ಶಿಪ್‌ಯಾರ್ಡ್ ಮತ್ತು ಗಂಗೊಳ್ಳಿಯಲ್ಲಿ ₹322 ಕೋಟಿ ವೆಚ್ಚದಲ್ಲಿ ಗ್ರೀನ್‌ಫೀಲ್ಡ್ ಶಿಪ್ ಬಿಲ್ಡಿಂಗ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. ಕಾರವಾರ ವಿಮಾನ ನಿಲ್ದಾಣದ ರನ್‌ವೇ ಅನ್ನು ಭಾರತೀಯ ನೌಕಾಪಡೆಯ ಜೊತೆ ಚರ್ಚಿಸಿ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ವಿಸ್ತರಿಸಲು ವೆಚ್ಚವನ್ನು ₹98 ಕೋಟಿಯಿಂದ ₹250 ಕೋಟಿಗೆ ಹೆಚ್ಚಿಸಲಾಗಿದೆ. ಇದಲ್ಲದೆ ಮಂಗಳೂರಿನಲ್ಲಿ 12 ಕೇಂದ್ರಗಳನ್ನು ಸಂಪರ್ಕಿಸುವ 343 ಕಿ.ಮೀ. ವ್ಯಾಪ್ತಿಯ 'ಕೋಸ್ಟಲ್ ಫೆರ್ರಿ ಸಿಸ್ಟಮ್' ಜಾರಿಗೆ ಮೂಲಭೂತ ಒಪ್ಪಿಗೆ ನೀಡಲಾಗಿದೆ.
ಮೂಲಸೌಕರ್ಯ ಮತ್ತು ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ, ನೇತ್ರಾವತಿ ನದಿಗೆ ಅಡ್ಡಲಾಗಿ ₹50 ಕೋಟಿ ವೆಚ್ಚದ ಸಂಪರ್ಕ ಸೇತುವೆ, ಬೈಂದೂರಿನಲ್ಲಿ ₹55 ಕೋಟಿ, ಮಂಗಳೂರು-ಅತ್ರಾಡಿ ಹೆದ್ದಾರಿಯ ಮರವೂರು ಬಳಿ ₹40 ಕೋಟಿ ಹಾಗೂ ಕಟೀಲು ಬಳಿ ₹33 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ಅಪ್ರೂವಲ್ ದೊರೆತಿದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ 15,000 ಕಿ.ಮೀ. ರಸ್ತೆ ಅಭಿವೃದ್ಧಿಗೆ ₹10,000 ಕೋಟಿ ಮತ್ತು ಊರುಗಳ ಒಳಗಿನ ಸಿಮೆಂಟ್ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿಗಳಿಗಾಗಿ ₹6,000 ಕೋಟಿ ಮಂಜೂರು ಮಾಡಲಾಗಿದೆ. ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳಿಗೆ ₹400 ಕೋಟಿ ಹಾಗೂ ವಿವಿಧ ಬಹುಗ್ರಾಮ ಕುಡಿಯುವ ನೀರು ಯೋಜನೆಗಳಿಗೆ ಹಣ ಮೀಸಲಿಡಲಾಗಿದೆ.
ಇತರ ಪ್ರಮುಖ ನಿರ್ಧಾರಗಳಲ್ಲಿ ₹1,300 ಕೋಟಿ ವೆಚ್ಚದಲ್ಲಿ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್‌ಗಳು ಹಾಗೂ ಎಐ-ಎಮ್‌ಎಲ್ ಸೌಲಭ್ಯಗಳನ್ನೊಳಗೊಂಡ 'ಕರ್ನಾಟಕ ಸಸ್ಟೈನಬಲ್ ಡೇಟಾ ಸೆಂಟರ್ ಪಾಲಿಸಿ 2026' ಜಾರಿಗೆ ತರಲು ತೀರ್ಮಾನಿಸಲಾಗಿದೆ. ಮಂಗಳೂರು ಜಿಲ್ಲಾ ಆಸ್ಪತ್ರೆಯನ್ನು 200 ಹೆಚ್ಚುವರಿ ಹಾಸಿಗೆಗಳೊಂದಿಗೆ ರೀಜನಲ್ ಸೆಂಟರ್ ಆಗಿ ಮೇಲ್ದರ್ಜೆಗೇರಿಸುವುದು, ಕಿಡ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ಶಾಖೆಗಳ ಸ್ಥಾಪನೆಗೆ ತಾತ್ವಿಕ ಅನುಮೋದನೆ, ಮೈಸೂರು ಕಾರಾಗೃಹದ ಸುರಕ್ಷತಾ ಗೋಡೆ ನಿರ್ಮಾಣಕ್ಕೆ ₹50 ಕೋಟಿ ಹಾಗೂ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳಿಗೆ ಜಮೀನು ಮಂಜೂರಾತಿ ನೀಡುವ ಪ್ರಮುಖ ತೀರ್ಮಾನಗಳನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದರು.