image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ–ಮಲೆನಾಡಿಗೆ ಹೊಸ ರೂಪ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಕರಾವಳಿ–ಮಲೆನಾಡಿಗೆ ಹೊಸ ರೂಪ: ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗಗಳಿಗೆ ಹೊಸ ರೂಪ ನೀಡುವ ಮೂಲಕ ಇಲ್ಲಿನ ಮಾನವ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಭಾಗದ ದೀರ್ಘಕಾಲದ ಬೇಡಿಕೆಗಳು ಮತ್ತು ಪ್ರಮುಖ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರದ ವಿಶೇಷ ಗಮನ ಹರಿಸಿದೆ ಎಂದರು.

ಕರಾವಳಿ ಭಾಗದಲ್ಲಿ 340 ಕಿ.ಮೀ. ಉದ್ದದ ಕರಾವಳಿ ತೀರವಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಂಡು ಈ ಭಾಗದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲಾಗುವುದು. ಅಲ್ಲದೆ, ಸ್ಥಳೀಯ ಪ್ರತಿಭಾವಂತ ಮಾನವ ಸಂಪತ್ತಿಗೆ ಇಲ್ಲೇ ಅವಕಾಶ ಕಲ್ಪಿಸಿ ವಲಸೆ ಹೋಗುವುದನ್ನು ತಡೆಯುವಂತಹ ವಾತಾವರಣ ಸೃಷ್ಟಿಸಲಾಗುವುದು ಎಂದು ಅವರು ಹೇಳಿದರು.

30–40 ವರ್ಷಗಳ ಬೇಡಿಕೆಗಳ ಈಡೇರಿಕೆಗೆ ಒತ್ತು

ಕರಾವಳಿ ಮತ್ತು ಮಲೆನಾಡು ಪ್ರದೇಶದ ಜನರು ಕಳೆದ ಮೂರು-ನಾಲ್ಕು ದಶಕಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಎಲ್ಲ ಪ್ರಮುಖ ಬೇಡಿಕೆಗಳ ಕುರಿತು ಶುಕ್ರವಾರ ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದರು.

ಕಸ್ತೂರಿರಂಗನ್ ವರದಿ ಮತ್ತು ರೈತರ ಸಮಸ್ಯೆಗಳ ಅಧ್ಯಯನಕ್ಕೆ ವಿಶೇಷ ಅಧಿವೇಶನ

ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸರ್ಕಾರ ಗಂಭೀರವಾಗಿದೆ. ವರದಿಯನ್ನು ತಿರಸ್ಕರಿಸುವ ನಿಲುವು ಹೊಂದಿದ್ದರೂ, ವಾಸ್ತವಾಂಶಗಳನ್ನು ನೇರವಾಗಿ ಅರಿಯಲು ತಾವೇ ಸ್ವತಃ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ರೈತರು, ಸ್ಥಳೀಯರು ಮತ್ತು ಹೋರಾಟಗಾರರನ್ನು ಭೇಟಿ ಮಾಡಿ ಚರ್ಚಿಸುತ್ತಿರುವುದಾಗಿ ತಿಳಿಸಿದರು.

ಅಸೆಂಬ್ಲಿಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಗ್ರೌಂಡ್ ರಿಯಾಲಿಟಿ ತಿಳಿದುಕೊಳ್ಳುವುದು ಅನಿವಾರ್ಯವಾಗಿದ್ದು, ಕಸ್ತೂರಿರಂಗನ್ ವರದಿ ಹಾಗೂ ರಾಜ್ಯದ ಪ್ರಸ್ತುತ ಬರ ಪರಿಸ್ಥಿತಿ ಮತ್ತು ರೈತರ ವಿವಿಧ ಸಮಸ್ಯೆಗಳ ಸಮಗ್ರ ಚರ್ಚೆಗಾಗಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

Category
ಕರಾವಳಿ ತರಂಗಿಣಿ