ಮಂಗಳೂರು ನಗರದ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ (ಪ್ರಜಾಸೌಧ) ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯು ಸೆಪ್ಟೆಂಬರ್ 18 ರಂದು ಬೆಳಿಗ್ಗೆ ನಡೆಯಲಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಗಣ್ಯರ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರ ಹಿತಾಸಕ್ತಿಗಾಗಿ ಮೂರು ದಿನಗಳ ಕಾಲ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆ ಹೊರಡಿಸಿದ್ದಾರೆ.
ಸೆಪ್ಟೆಂಬರ್ 17 ರಂದು ಸಂಜೆ ರಾಜ್ಯದ ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಚಿವರು ಆಗಮಿಸಲಿದ್ದು, ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಮಂಗಳೂರು ನಗರದ ಮುಖ್ಯರಸ್ತೆಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಮಧ್ಯಾಹ್ನ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಉಡುಪಿಗೆ ತೆರಳಿ ವಾಪಸ್ ಮಂಗಳೂರಿಗೆ ಬಂದು ತಂಗಲಿದ್ದು, ಮರುದಿನ ಬೆಳಿಗ್ಗೆ ನಿರ್ಗಮಿಸಲಿದ್ದಾರೆ. ಗಣ್ಯರ ಸಂಚಾರವಿರುವ ಪ್ರಮುಖ ರಸ್ತೆಗಳೆಂದರೆ ಸೆಪ್ಟೆಂಬರ್ 17 ರ ಸಂಜೆ ಮತ್ತು ಸೆಪ್ಟೆಂಬರ್ 19 ರ ಬೆಳಿಗ್ಗೆ ಬಜಪೆ ವಿಮಾನ ನಿಲ್ದಾಣದಿಂದ ಕಾವೂರು - ಬೋಂದೆಲ್ – ಮೇರಿಹಿಲ್ – ಕೆ.ಪಿ.ಟಿ. - ಕದ್ರಿ ಕಂಬಳ - ಬಂಟ್ಸ್‌ಹಾಸ್ಟೆಲ್ – ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್ - ಹಂಪನಕಟ್ಟೆ – ಕ್ಲಾಕ್ ಟವರ್ - ಹ್ಯಾಮಿಲ್ಟನ್ ಜಂಕ್ಷನ್ ಮಾರ್ಗವಾಗಿ ಮತ್ತು ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಹ್ಯಾಮಿಲ್ಟನ್ ಜಂಕ್ಷನ್ - ಕ್ಲಾಕ್ ಟವರ್ - ಹಂಪನಕಟ್ಟೆ - ಡಾ| ಬಿ.ಆರ್.ಅಂಬೇಡ್ಕರ್ ಜಂಕ್ಷನ್ - ಕೆ.ಪಿ.ಟಿ. ಜಂಕ್ಷನ್ - ನಂತೂರು ವೃತ್ತ - ಪಂಪ್‌ವೆಲ್ - ನಾಗುರಿ - ಬಜಾಲ್ ಕ್ರಾಸ್ (ಪ್ರಜಾಸೌಧ) - ಪಡೀಲ್ ಜಂಕ್ಷನ್ ಮಾರ್ಗವಾಗಿ ಗಣ್ಯರು ತೆರಳಲಿದ್ದಾರೆ.
ಸಾರ್ವಜನಿಕರಿಗೆ ಪ್ರಮುಖ ಸೂಚನೆಗಳಂತೆ ಮೇಲ್ಕಂಡ ಗಣ್ಯರ ಸಂಚಾರ ಮಾರ್ಗಗಳಲ್ಲಿ ರಸ್ತೆಬದಿಯಲ್ಲಿ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ಮನವಿ ಮಾಡಲಾಗಿದೆ. ಆಂಬ್ಯುಲೆನ್ಸ್ ಹಾಗೂ ಇತರೆ ತುರ್ತು ಸೇವಾ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆ ಇರುವುದಿಲ್ಲ. ಬದ್ರಿಯಾ ಜಂಕ್ಷನ್‌ನಿಂದ ಹೋಟೆಲ್ ತಾಜ್ ವಿವಾಂತ್ ಮುಂಭಾಗದ ಮೂಲಕ ಹ್ಯಾಮಿಲ್ಟನ್ ಜಂಕ್ಷನ್‌ಗೆ ತೆರಳುವ ವಾಹನಗಳು ಬದ್ರಿಯಾ ಜಂಕ್ಷನ್ - ನಿಲೇಶ್ವರ ರಸ್ತೆ – ರೋಸಾರಿಯೋ ರಸ್ತೆ ಮುಖೇನಾ ಸಂಚರಿಸುವುದು. ಹ್ಯಾಮಿಲ್ಟನ್ ಜಂಕ್ಷನ್‌ನಿಂದ ಬದ್ರಿಯಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳು ಹ್ಯಾಮಿಲ್ಟನ್ ಜಂಕ್ಷನ್ – ನೆಲ್ಲಿಕಾಯಿ ರಸ್ತೆ ಮೂಲಕ ಸಂಚರಿಸಬೇಕು. ಪಂಪ್‌ವೆಲ್ ಜಂಕ್ಷನ್‌ನಿಂದ ನಾಗುರಿ ಮೂಲಕ ಪಡೀಲ್ ಕಡೆಗೆ ಅಥವಾ ಪಡೀಲ್‌ನಿಂದ ಪಂಪ್‌ವೆಲ್ ಕಡೆಗೆ ಸಂಚರಿಸುವ ವಾಹನಗಳು ನಂತೂರು ವೃತ್ತ – ಕೈಕಂಬ - ಮರೋಳಿ ಮೂಲಕ ಅಥವಾ ತೊಕ್ಕೊಟ್ಟು – ದೇರಳಕಟ್ಟೆ – ಮುಡಿಪು - ಬೊಳ್ಯಾರ್ – ಮೆಲ್ಕಾರ್ ಮೂಲಕ ಸಾಗಬಹುದು. ಬಜಾಲ್ ಕ್ರಾಸ್ (ಪ್ರಜಾಸೌಧ) ನಿಂದ ಬಜಾಲ್ ಅಥವಾ ಕಂಕನಾಡಿ ರೈಲ್ವೆ ನಿಲ್ದಾಣ ಕಡೆಗೆ ತೆರಳುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಂದುವರಿದು ಜಪ್ಪಿನಮೊಗರು ದ್ವಾರ - ಬಜಾಲ್ ಮೂಲಕ ಸಂಚರಿಸುವುದು. ತೊಕ್ಕೊಟ್ಟು ಕಡೆಯಿಂದ ಪಂಪ್‌ವೆಲ್ ಕಡೆಗೆ ಬರುವ ವಾಹನಗಳು ಮಹಾಕಾಳಿಪಡ್ಪು – ಮಂಗಳಾದೇವಿ ಮೂಲಕ ನಗರಕ್ಕೆ ಪ್ರವೇಶಿಸಬೇಕು.
ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಾಗೂ ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಕೋರಿದ್ದಾರೆ.