image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಲ್ ನಿನೋ ಪ್ರಭಾವ: ಅಟ್ಲಾಂಟಿಕ್‌ನಲ್ಲಿ ತಗ್ಗಿದ ಹ್ಯರಿಕೇನ್‌ಗಳ ಅಬ್ಬರ

ಎಲ್ ನಿನೋ ಪ್ರಭಾವ: ಅಟ್ಲಾಂಟಿಕ್‌ನಲ್ಲಿ ತಗ್ಗಿದ ಹ್ಯರಿಕೇನ್‌ಗಳ ಅಬ್ಬರ

ನವದೆಹಲಿ : 'ಎಲ್ ನಿನೋ' ವಾತಾವರಣದ ತೀವ್ರ ಪ್ರಭಾವದಿಂದಾಗಿ ಅಮೆರಿಕದ ಅಟ್ಲಾಂಟಿಕ್ ಪ್ರದೇಶದಲ್ಲಿ ಈ ವರ್ಷದ ಹ್ಯುರಿಕೇನ್ ಅವಧಿ ಆರಂಭವಾಗಿ 100 ದಿನಗಳು ಕಳೆದರೂ ಇದುವರೆಗೆ ಒಂದೇ ಒಂದು ಹ್ಯುರಿಕೇನ್ ರೂಪುಗೊಳ್ಳದಿರುವುದು ಜಾಗತಿಕ ಹವಾಮಾನ ತಜ್ಞರಲ್ಲಿ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಚಂಡಮಾರುತಗಳ ಗರಿಷ್ಠ ಚಟುವಟಿಕೆಯ ಅವಧಿಯಾಗಿದ್ದರೂ, ಪ್ರಸ್ತುತ ವಿಶ್ವದ ಸಾಗರಗಳ ನೀರು ಅಸಾಮಾನ್ಯವಾಗಿ ಕಾಯ್ದಿದ್ದರೂ ಅಟ್ಲಾಂಟಿಕ್ ಭಾಗದಲ್ಲಿ ಮಾತ್ರ ಹ್ಯುರಿಕೇನ್ ಪ್ರಕ್ರಿಯೆಗಳು ಸಂಪೂರ್ಣ ಕುಂಠಿತಗೊಂಡಿವೆ.

ಎಲ್ ನಿನೋ ಪರಿಣಾಮದಿಂದಾಗಿ ಅಟ್ಲಾಂಟಿಕ್‌ನಲ್ಲಿ ಮೇಲ್ಮಟ್ಟದ ಗಾಳಿಯ ವೇಗ ಮತ್ತು ದಿಕ್ಕಿನಲ್ಲಿ ತೀವ್ರ ಬದಲಾವಣೆ (ವಿಂಡ್ ಶೇರ್) ಉಂಟಾಗಿದ್ದು, ರೂಪುಗೊಳ್ಳಲು ಯತ್ನಿಸುವ ಚಂಡಮಾರುತಗಳು ಬಲಿಷ್ಠವಾಗುವ ಮೊದಲೇ ಚದುರಿಹೋಗುತ್ತಿವೆ. ಇದರ ಜೊತೆಗೆ ಒಣ ಗಾಳಿ ಮತ್ತು ಕೆಳಮುಖ ಗಾಳಿಯ ಪ್ರವಾಹವೂ ಇವುಗಳ ಬೆಳವಣಿಗೆಗೆ ಅಡ್ಡಿಯಾಗಿದೆ. ಸಾಮಾನ್ಯ ಅಟ್ಲಾಂಟಿಕ್ ಹ್ಯುರಿಕೇನ್ ಅವಧಿಯಲ್ಲಿ ಸರಾಸರಿ 14 ಹೆಸರಿನ ಬಿರುಗಾಳಿಗಳು, 7 ಹ್ಯುರಿಕೇನ್‌ಗಳು ಮತ್ತು 3 ಪ್ರಮುಖ ಹ್ಯುರಿಕೇನ್‌ಗಳು ಉಂಟಾಗುತ್ತವೆ. ಆದರೆ ಈ ಬಾರಿ ಇದುವರೆಗೆ ಕೇವಲ ಐದು ಸಣ್ಣ ಉಷ್ಣವಲಯದ ಬಿರುಗಾಳಿಗಳು ಮಾತ್ರ ದಾಖಲಾಗಿದ್ದು, ಯಾವುದೂ ಹ್ಯುರಿಕೇನ್ ಮಟ್ಟವನ್ನು ತಲುಪಿಲ್ಲ.

ಸಮುದ್ರದ ಮೇಲ್ಮೈಯ ಬಿಸಿಯಾದ ನೀರಿನಿಂದ ಶಕ್ತಿ ಪಡೆದು ರೂಪುಗೊಳ್ಳುವ ಅತ್ಯಂತ ಬಲಿಷ್ಠ ಉಷ್ಣವಲಯದ ಚಂಡಮಾರುತಗಳನ್ನು ಅಟ್ಲಾಂಟಿಕ್, ಕ್ಯಾರಿಬಿಯನ್ ಮತ್ತು ಈಶಾನ್ಯ ಪೆಸಿಫಿಕ್ ಪ್ರದೇಶಗಳಲ್ಲಿ 'ಹ್ಯುರಿಕೇನ್' ಎಂದು ಕರೆಯಲಾಗುತ್ತದೆ. ಬಿಸಿ ನೀರಿನಿಂದ ನೀರಾವಿ ಮೇಲೇರಿ ತಣ್ಣಗಾಗುವಾಗ ಬಿಡುಗಡೆಯಾಗುವ ಶಕ್ತಿಯು ಚಂಡಮಾರುತದ ಕೇಂದ್ರ ಭಾಗದಲ್ಲಿ ಗಾಳಿಯ ಒತ್ತಡವನ್ನು ತೀವ್ರವಾಗಿ ತಗ್ಗಿಸುತ್ತದೆ. ಪರಿಣಾಮವಾಗಿ ಸುತ್ತಮುತ್ತಲಿನ ಗಾಳಿ ಕೇಂದ್ರದತ್ತ ರಭಸವಾಗಿ ಚಲಿಸುತ್ತದೆ. ಹ್ಯುರಿಕೇನ್‌ಗಳ ಶಾಂತ ಕೇಂದ್ರಭಾಗವನ್ನು 'ಐ' (Eye) ಎಂದು ಹಾಗೂ ಅದರ ಸುತ್ತಲಿರುವ ಭಾರಿ ಮಳೆ ಮತ್ತು ಪ್ರಚಂಡ ಗಾಳಿ ಬೀಸುವ ಭಾಗವನ್ನು 'ಐವಾಲ್' (Eyewall) ಎಂದು ಗುರುತಿಸಲಾಗುತ್ತದೆ.

 

Category
ಕರಾವಳಿ ತರಂಗಿಣಿ