image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಸಮಗ್ರ ಉತ್ತೇಜನ: ಕ್ರೂಸ್‌, ಹೌಸ್‌ಬೋಟ್‌, ಬೀಚ್‌ ಅಭಿವೃದ್ಧಿಗೆ ಕ್ರಮ: ಸಚಿವ ಕೆ.ಜೆ. ಜಾರ್ಜ್‌

ಕರಾವಳಿ–ಮಲೆನಾಡು ಪ್ರವಾಸೋದ್ಯಮಕ್ಕೆ ಸಮಗ್ರ ಉತ್ತೇಜನ: ಕ್ರೂಸ್‌, ಹೌಸ್‌ಬೋಟ್‌, ಬೀಚ್‌ ಅಭಿವೃದ್ಧಿಗೆ ಕ್ರಮ: ಸಚಿವ ಕೆ.ಜೆ. ಜಾರ್ಜ್‌

ಮಂಗಳೂರು: ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮ ಸಾಮರ್ಥ್ಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ವಿಶೇಷ ಒತ್ತು ನೀಡಿದ್ದು, ನದಿ ಪ್ರವಾಸೋದ್ಯಮ, ಕ್ರೂಸ್‌, ಹೌಸ್‌ಬೋಟ್‌, ಬೀಚ್‌ ಪ್ರವಾಸೋದ್ಯಮ, ವಾಟರ್‌ ಸ್ಪೋರ್ಟ್ಸ್‌ ಹಾಗೂ ಸ್ಥಳೀಯ ಸಮುದಾಯ ಆಧಾರಿತ ಪ್ರವಾಸೋದ್ಯಮವನ್ನು ಪರಸ್ಪರ ಜೋಡಿಸುವ ಯೋಜನೆಗಳನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಕೆ.ಜೆ. ಜಾರ್ಜ್‌ ತಿಳಿಸಿದರು.

ಮಂಗಳೂರಿನ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನೇತ್ರಾವತಿ ನದಿ, ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಬೀಚ್‌, ಕರಾವಳಿ ಪ್ರದೇಶಗಳು ಹಾಗೂ ನ್ಯೂ ಮಂಗಳೂರು ಬಂದರಿನ ಪ್ರವಾಸೋದ್ಯಮ ಸಾಮರ್ಥ್ಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ನೇತ್ರಾವತಿ ನದಿಯಲ್ಲಿ ರಿವರ್‌ ಕ್ರೂಸ್‌ ಹಾಗೂ ಹೌಸ್‌ಬೋಟ್‌ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಸಮುದಾಯದ ಜನರನ್ನು ಸಕ್ರಿಯವಾಗಿ ತೊಡಗಿಸಿಕೊಂಡು, ಅವರಿಗೆ ಹೊಸ ಉದ್ಯೋಗ ಮತ್ತು ಆದಾಯದ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಲಾಗಿದೆ. ಕ್ರೂಸ್‌ ಹಡಗುಗಳಲ್ಲಿ ಮಂಗಳೂರಿಗೆ ಬರುವ ಪ್ರವಾಸಿಗರು ಕರಾವಳಿಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ ಕ್ರೂಸ್‌ ಸಂಪರ್ಕಿತ ಪ್ರವಾಸಿ ವಲಯಗಳು ಮತ್ತು ಅಗತ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು.

ನ್ಯೂ ಮಂಗಳೂರು ಬಂದರಿನ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರೂಸ್‌ ಹಡಗುಗಳನ್ನು ಆಕರ್ಷಿಸುವ ಕುರಿತು ಚರ್ಚಿಸಲಾಗಿದೆ. ಮಂಗಳೂರು–ಕಾರವಾರ–ಗೋವಾ ವಲಯದಲ್ಲಿ ದೇಶೀಯ ಕ್ರೂಸ್‌ ಸೇವೆಗಳನ್ನು ಉತ್ತೇಜಿಸಲು ಖಾಸಗಿ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುವುದು. ಕರಾವಳಿ ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಜೆಟ್ಟಿ ಹಾಗೂ ಇತರೆ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಅನುಮತಿಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ.

ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಬೀಚ್‌ ಸೇರಿದಂತೆ ಪ್ರಮುಖ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಗುಣಮಟ್ಟದ ಮೂಲಸೌಕರ್ಯ, ಆಹಾರ ಮಳಿಗೆಗಳು, ಶ್ಯಾಕ್‌ಗಳು, ಸ್ವಚ್ಛತಾ ವ್ಯವಸ್ಥೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ತಾತ್ಕಾಲಿಕ ಹಾಗೂ ಅಸಂಘಟಿತ ವ್ಯವಸ್ಥೆಗಳ ಬದಲಿಗೆ, ಏಕರೂಪದ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಖಚಿತಪಡಿಸುವ ಮಾದರಿಯನ್ನು ರೂಪಿಸಲಾಗುವುದು. ತಣ್ಣೀರುಬಾವಿ ಬ್ಲೂ ಫ್ಲ್ಯಾಗ್‌ ಬೀಚ್‌ನ ಮೊದಲ ಹಂತದ ಮೂಲಸೌಕರ್ಯ ಕಾಮಗಾರಿಗಳನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಕರಾವಳಿಯಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗೆ Coastal Regulation Zone (CRZ) ನಿಯಮಗಳು ಪ್ರಮುಖ ಸವಾಲಾಗಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವಿದೆ ಎಂದು ಸಚಿವರು ಹೇಳಿದರು.

ನೆರೆಯ ರಾಜ್ಯಗಳು ಇಂತಹ ನಿಯಮಗಳಡಿ ಹೇಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಿವೆ ಎಂಬುದನ್ನು ಅಧ್ಯಯನ ಮಾಡಿ, ಅಗತ್ಯ ಅನುಮತಿಗಳು ಮತ್ತು ಸ್ಪಷ್ಟೀಕರಣಗಳಿಗಾಗಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲಾಗುವುದು.

ವಾಟರ್‌ ಸ್ಪೋರ್ಟ್ಸ್‌, ಸಾಹಸ ಪ್ರವಾಸೋದ್ಯಮ ಹಾಗೂ ಕರಾವಳಿ ಉತ್ಸವಗಳನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಮುನ್ನ, ರಸ್ತೆ ಸಂಪರ್ಕ, ಪ್ರವೇಶ ಮಾರ್ಗ, ಸುರಕ್ಷತೆ ಹಾಗೂ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಕರ್ಯವನ್ನು ಬಲಪಡಿಸಬೇಕಾಗಿದೆ. ಮೂಲಸೌಕರ್ಯವನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ ನಂತರ ಖಾಸಗಿ ಹೂಡಿಕೆ ಮತ್ತು ವಾಟರ್‌ ಸ್ಪೋರ್ಟ್ಸ್‌ ಚಟುವಟಿಕೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಾಧ್ಯವಾಗಲಿದೆ.

ಪ್ರವಾಸಿಗರಿಗೆ ಸ್ಥಳೀಯ ಜೀವನಶೈಲಿ ಮತ್ತು ಸಂಸ್ಕೃತಿಯ ಅನುಭವ ನೀಡುವ ನೈಜ ಹೋಂಸ್ಟೇ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಾಗುವುದು. ಆದರೆ ಹೋಂಸ್ಟೇ ಹೆಸರಿನಲ್ಲಿ ದೊಡ್ಡ ಪ್ರಮಾಣದ ವಾಣಿಜ್ಯ ಲಾಡ್ಜ್‌ ಅಥವಾ ಹೋಟೆಲ್‌ ಚಟುವಟಿಕೆ ನಡೆಸುವುದಕ್ಕೆ ಅವಕಾಶ ನೀಡಲಾಗುವುದಿಲ್ಲ.

ಹೋಂಸ್ಟೇ ಮತ್ತು ವಾಣಿಜ್ಯ ವಸತಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಜಾರಿಗೊಳಿಸಿ, ನಿಗದಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುವುದು.ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಕ್ಯಾಸಿನೋ ಸಂಸ್ಕೃತಿಯನ್ನು ಉತ್ತೇಜಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

“ನಮ್ಮ ಉದ್ದೇಶ ಕರಾವಳಿಯನ್ನು ಕ್ಯಾಸಿನೋ ಕೇಂದ್ರವನ್ನಾಗಿಸುವುದಲ್ಲ. ಸ್ಥಳೀಯ ಜನರಿಗೆ ಉದ್ಯೋಗ ಸೃಷ್ಟಿಸುವ, ಮೀನುಗಾರರು ಮತ್ತು ಕರಾವಳಿ ಸಮುದಾಯಕ್ಕೆ ನೇರವಾಗಿ ಆದಾಯ ತರುವ, ಪರಿಸರವನ್ನು ಸಂರಕ್ಷಿಸುವ ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ನೀಡುವ ಸುಸ್ಥಿರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ಸಮುದ್ರ, ನದಿ, ಬೀಚ್‌ ಮತ್ತು ಬಂದರು—ಈ ಎಲ್ಲ ಸಂಪನ್ಮೂಲಗಳನ್ನು ಸಮಗ್ರವಾಗಿ ಬಳಸಿಕೊಂಡು ಮಂಗಳೂರನ್ನು ಪ್ರಮುಖ ಕರಾವಳಿ ಮತ್ತು ಕ್ರೂಸ್‌ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಶ್ರೀ ಕೆ.ಜೆ. ಜಾರ್ಜ್‌ ತಿಳಿಸಿದರು.

Category
ಕರಾವಳಿ ತರಂಗಿಣಿ