ಕಿರ್ಗಿಸ್ತಾನ್ : ಕಿರ್ಗಿಸ್ತಾನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) 26ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಮ್ಮುಖದಲ್ಲೇ ಮಾತನಾಡಿದ ಅವರು, "ಭಯೋತ್ಪಾದನೆಯು ಮಾನವತೆಗೆ ಅತ್ಯಂತ ಗಂಭೀರ ಸವಾಲಾಗಿದೆ. ಭಯೋತ್ಪಾದನೆ ಎಂದಿಗೂ ಯಾವ ದೇಶಕ್ಕೂ ಕಾರ್ಯತಂತ್ರದ ಆಸ್ತಿಯಾಗಲು ಸಾಧ್ಯವಿಲ್ಲ" ಎಂದು ಖಡಕ್ ಆಗಿ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇವಲ 'ಕ್ರಿಯೆ-ಪ್ರತಿಕ್ರಿಯೆ' ಧೋರಣೆಗೆ ಅಂಟಿಕೊಳ್ಳಬಾರದು ಎಂದು ಪ್ರತಿಪಾದಿಸಿದ ಪ್ರಧಾನಿ ಮೋದಿ, ಉಗ್ರರಿಗೆ ಲಭಿಸುವ ಹಣಕಾಸು ನೆರವು, ನೇಮಕಾತಿ, ಪ್ರತ್ಯೇಕತಾವಾದಿ ಪ್ರಚೋದನೆ ಹಾಗೂ ಸುರಕ್ಷಿತ ತಾಣ ಒದಗಿಸುವ ಸಂಪೂರ್ಣ ವ್ಯವಸ್ಥೆಯನ್ನು ಒಕ್ಕೊರಲಿನಿಂದ ಧ್ವಂಸಗೊಳಿಸಬೇಕು ಎಂದಿದ್ದಾರೆ. ಭಯೋತ್ಪಾದನೆಯನ್ನು ದೇಶದ ನೀತಿಯ ಸಾಧನವಾಗಿ ಬಳಸುವ ಮತ್ತು ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರಗಳಿಗೆ ಜಾಗತಿಕವಾಗಿ ಗಂಭೀರ ಸಂದೇಶ ರವಾನೆಯಾಗಬೇಕು ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ, ಪಹಲ್ಗಾಮ್ ದಾಳಿಯ ಬಳಿಕ ಭಾರತವು ಸಿಂಧೂ ನದಿ ಒಪ್ಪಂದದ ಕಾರ್ಯಾಚರಣೆಯನ್ನು ತಡೆಹಿಡಿದಿರುವುದನ್ನು ಪ್ರಸ್ತಾಪಿಸಿದ್ದ ಪಾಕ್ ಪ್ರಧಾನಿ ಷರೀಫ್, ನೀರನ್ನು ರಾಜಕೀಯ ಒತ್ತಡ ಹೇರುವ ಸಾಧನವಾಗಿ ಬಳಸಲಾಗುತ್ತಿದೆ ಮತ್ತು ಇದು ಅಸ್ವೀಕಾರಾರ್ಹ ಎಂದು ಟೀಕಿಸಿದ್ದರು. ಅಲ್ಲದೆ, ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆ ಪ್ರಚೋದಿಸಲು ಭಾರತವು ಅಫ್ಗಾನಿಸ್ತಾನದ ನೆಲವನ್ನು ಬಳಸಿಕೊಳ್ಳುತ್ತಿದೆ ಎಂದೂ ಷರೀಫ್ ಆರೋಪಿಸಿದ್ದು, ಇದಕ್ಕೆ ಎಸ್‌ಸಿಒ ವೇದಿಕೆಯಲ್ಲೇ ಪ್ರಧಾನಿ ಮೋದಿ ನೇರ ಪ್ರತ್ಯುತ್ತರ ನೀಡಿದ್ದಾರೆ.