ಮುಂಬೈ : ದೇಶದ ಆರ್ಥಿಕ ಬೆಳವಣಿಗೆ ಈಗ ಕೇವಲ ಬೃಹತ್ ಮೆಟ್ರೋ ನಗರಗಳಿಗೆ ಸೀಮಿತವಾಗಿರದೆ, ಸಣ್ಣ ಮತ್ತು ಉದಯೋನ್ಮುಖ ನಗರಗಳು ಭಾರತದ ಪ್ರಗತಿಗೆ ಭಾರಿ ಕೊಡುಗೆ ನೀಡುತ್ತಿವೆ. ಜಾಗತಿಕ ಡೇಟಾ ಮತ್ತು ವಿಶ್ಲೇಷಣಾ ಸಂಸ್ಥೆ 'ಡನ್ ಅಂಡ್ ಬ್ರಾಡ್‌ಸ್ಟ್ರೀಟ್' ಬಿಡುಗಡೆ ಮಾಡಿರುವ 2026ರ ಏಪ್ರಿಲ್-ಜೂನ್ ತ್ರೈಮಾಸಿಕದ 'ಸಿಟಿ ವಿಟಾಲಿಟಿ ಇಂಡೆಕ್ಸ್' (CVI) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಉಪಗ್ರಹ ದತ್ತಾಂಶ ಹಾಗೂ ನಾನಾ ಆರ್ಥಿಕ ಸೂಚಕಗಳನ್ನು ಆಧರಿಸಿ ದೇಶದ 800ಕ್ಕೂ ಹೆಚ್ಚು ಜಿಲ್ಲೆಗಳ ಚಟುವಟಿಕೆಗಳನ್ನು ಅಧ್ಯಯನ ಮಾಡಿ ಈ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗಿದೆ.
ಐಟಿ ಸೇವೆಗಳು, ಆಟೋಮೊಬೈಲ್ ಉತ್ಪಾದನೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅತ್ಯುತ್ತಮ ಸಾಧನೆಯಿಂದಾಗಿ ಮಹಾರಾಷ್ಟ್ರದ ಪುಣೆ ನಗರವು ದೇಶದ ಅತ್ಯಂತ ಪ್ರಭಾವಶಾಲಿ ಮೆಟ್ರೋಪಾಲಿಟನ್ ನಗರವಾಗಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ಗುಜರಾತ್‌ನ ಅಹಮದಾಬಾದ್ ದ್ವಿತೀಯ ಸ್ಥಾನದಲ್ಲಿದ್ದರೆ, ಬೃಹತ್ ನಗರಗಳ ಪೈಕಿ ಕೋಲ್ಕತ್ತಾ ಅತಿ ವೇಗದ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿ ಹೂಡಿಕೆದಾರರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. ಮತ್ತೊಂದೆಡೆ, ಉದಯೋನ್ಮುಖ ನಗರಗಳ ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಸೌತ್ 24 ಪರಗಣ ಪ್ರಥಮ ಸ್ಥಾನ ಪಡೆದಿದ್ದು, ನಾರ್ತ್ 24 ಪರಗಣ ಮತ್ತು ಮಹಾರಾಷ್ಟ್ರದ ಥಾಣೆ ಜಿಲ್ಲೆಗಳು ನಂತರದ ಸ್ಥಾನಗಳನ್ನು ಅಲಂಕರಿಸಿವೆ.
ಇದರ ಜೊತೆಗೆ ಜೈಪುರ, ನಾಸಿಕ್, ಸೂರತ್, ಮುರ್ಷಿದಾಬಾದ್ ಹಾಗೂ ರಂಗಾರೆಡ್ಡಿ ಜಿಲ್ಲೆಗಳು ಆಯಾ ಭಾಗದ ಪ್ರಾದೇಶಿಕ ಅಭಿವೃದ್ಧಿಯ ಇಂಜಿನ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ ಒಂದು ದಶಕದಿಂದ ಆನಂದ್, ಅಯೋಧ್ಯೆ, ರಾಂಪುರ ಹಾಗೂ ಔರಂಗಾಬಾದ್ ಜಿಲ್ಲೆಗಳು ಸತತವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತ ಬಂದಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿದ್ದು, ಪುಣೆಯಂತಹ ದೊಡ್ಡ ನಗರಗಳ ಜೊತೆಗೆ ಸಣ್ಣ ಜಿಲ್ಲೆಗಳು ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಆಕರ್ಷಣೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ ಎಂದು ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಡಾ. ಅರುಣ್ ಸಿಂಗ್ ತಿಳಿಸಿದ್ದಾರೆ. ದೇಶದ ನಗರೀಕರಣವು ಮೂಲೆ ಮೂಲೆಯೂ ವಿಸ್ತರಿಸುತ್ತಿರುವುದು ಉದ್ಯಮಿಗಳು ಹಾಗೂ ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ.