ಅದೊಂದು ಕಾಲವಿತ್ತು ಹೆಣ್ಣು ಮಕ್ಕಳು ಮನೆಯಿಂದ ಹೊರ ಬರಬೇಕಾದರೆ ಹಿರಿಯರು ಅಥವಾ ಮನೆಯ ಗಂಡಸರು ಜೊತೆಯಿರಬೇಕಿತ್ತು. ಕ್ರಮೇಣ ಅಂತಹ ಪರಿಸ್ಥಿತಿಯಿಂದ ಹೊರ ಬರಲಾರಂಬಿಸಿ ಮಹಿಳೆಯರಿಗೂ ವಿಧ್ಯಾಭ್ಯಾಸ ದೊರೆಯುವಂತಾಯಿತು. ಕ್ರಮೇಣ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಗುರುತಿಸಿಕೊಳ್ಳ ಲಾರಂಬಿಸಿದರು. ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯು ತನ್ನ ಸೇವೆಯನ್ನು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ದಕ್ಷತೆ ಮತ್ತು ಕುಶಾಗ್ರಮತಿ ಸಾದರ ಪಡಿಸುವುದರೊಂದಿಗೆ ಪುರುಷರೊಂದಿಗೆ, ಅವರಿಗೆ ಸರಿ ಸಮಾನರಾಗಿ ಕೆಲಸ ಮಾಡುತ್ತಿದ್ದಾರೆ. ಮಿಲಿಟರಿ ಸೇವೆಯಲ್ಲೂ ಸಹ ತನ್ನ ಸಾಮರ್ಥವನ್ನು ಜಗತ್ತಿಗೆ ತೋರಿಸಿದ್ದಾರೆ. ಮಹಿಳೆಯರು ಸೈಕಲ್ ಓಡಿಸಿದಾಗ ಬೆರಗಾಗಿ ನೋಡುವ ಕಾಲ ಹೋಗಿ ಕ್ರಮೇಣ ಮೋಟರ್ ಸೈಕಲ್, ಕಾರು ನಂತರ ಬಸ್ಸುಗಳನ್ನು ಓಡಿಸಿದರು. ಅದರಿಂದ ಮುನ್ನಡೆದು ವಿಮಾನದ ಪೈಲಟ್‌ಗಳಾಗಿ ಸೈ ಎಣಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ ಮಹಿಳೆಯರು ಹಳಿಯಲ್ಲಿ ರೈಲು ಓಡಿಸುತ್ತಿದ್ದಾರೆ ಎನ್ನುವುದು ಖುಷಿಯ ವಿಷಯ. 1988ರಲ್ಲಿ ಭಾರತದ ಮೊದಲ ಮಹಿಳಾ ಲೋಕೋಪೈಲೆಟ್ (ರೈಲು ಚಾಲಕಿ) ಆಗಿ ಮಹಾರಾಷ್ಟçದ ಸುರೇಖ ಯಾದವ್‌ರವರು ಪರಿಚಿತರಾದರು. ಆ ನಂತರ ಕೆಲವು ಮಹಿಳೆಯರು ಈ ಸಾಹಸಕ್ಕೆ ಕೈ ಹಾಕಿದ್ದಾರೆ, ಅಂತವರಲ್ಲಿ ನಮ್ಮ ತುಳುನಾಡಿನ ಹೆಣ್ಣು ಮಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಮೂಲದ ವನಿತಾಶ್ರಿಯವರು. ಕರಾವಳಿ ಕರ್ನಾಟಕದ ಮೊದಲ ಹಾಗೂ ಏಕೈಕ ಮಹಿಳಾ ಲೊಕೊ ಪೈಲಟ್. ರೈಲ್ವೆಯಲ್ಲಿ ಸಿಗುವ ಸೌಲಭ್ಯಗಳು, ಮತ್ತು ಕನ್ನಡಿಗರ ವಿರಳತೆ, ಇದರ ನಡುವೆ ಲೊಕೋಪೈಲಟ್ ಹುದ್ದೆಯನ್ನು ಸರಾಗವಾಗಿ ನಿಭಾಯಿಸುತ್ತಿರುವ ವನಿತಾಶ್ರೀಯವರ ಸಾಧನೆ ಅನನ್ಯ. ಕರಾವಳಿ ಕರ್ನಾಟಕದ ಮಹಿಳೆಯೊಬ್ಬರು ಭಾರತೀಯ ರೈಲ್ವೆಗೆ ಲೊಕೊ ಪೈಲಟ್ ರೂಪದಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಮೂಲಕ ಆಟೋಮೊಬೈಲ್ ಡಿಪ್ಲೊಮಾ ಮುಗಿಸಿದ ವನಿತಶ್ರೀ ರೈಲ್ವೆ ಇಲಾಖೆಯಲ್ಲಿ ಉದ್ಯೋಗಾವಕಾಶಕ್ಕಾಗಿ ಪರೀಕ್ಷೆಗೆ ಹಾಜರಾದರು ಮತ್ತು 2009 ರಲ್ಲಿ ಚೆನ್ನೈನಲ್ಲಿ ಸಹಾಯಕ ಲೊಕೊ ಪೈಲಟ್ ಆಗಿ ತಮ್ಮ ವೃತ್ತಿಪರಜೀವನವನ್ನು ಪ್ರಾರಂಭಿಸಿದರು.
ವನಿತಾ ಅವರ ಪತಿ ಸತೀಶ್ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ದಂಪತಿಗೆ ಇಬ್ಬರು ಗಂಡು ಕರಾವಳಿ ಕರ್ನಾಟಕದ ಪ್ರಥಮ ಮಹಿಳಾ ಲೊಕೋಪೈಲಟ್ ವನಿತಾಶ್ರೀ ಮಕ್ಕಳಿದ್ದಾರೆ. ಇವರ ತಂದೆ ನಾರಾಯಣ ನಾಯಕ್ ಪಶುಸಂಗೋಪನಾ ವಿಭಾಗದ ನಿವೃತ್ತ ಕಂಪೌಂಡರ್. ತಾಯಿ ಜಯಶ್ರೀ ನಗರದ ಪ್ರಾವಿಡೆಂಟ್ ಫಂಡ್ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು. ವನಿತಾಶ್ರೀ ಪ್ರಮಾಣೀಕೃತ ಲೊಕೊ ಪೈಲಟ್ ಆಗಿ ಸುಮಾರು ಐದು ವರ್ಷಗಳ ಕಾಲ ಬೇರೆ ಬೇರೆ ಊರುಗಳಿಗೆ ರೈಲು ಚಲಾಯಿಸಿದ್ದಾರೆ. ಪ್ರಸ್ತುತ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದಲ್ಲಿ ಶಂಟಿಂಗ್ ಲೋಕೋ ಪೈಲಟ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿರ್ದಿಷ್ಟ ರೈಲ್ವೆ ನಿಲ್ದಾಣಗಳ ಮಿತಿಯೊಳಗೆ ರೈಲುಗಳು ಅಥವಾ ಎಂಜಿನ್‌ಗಳನ್ನು ಪೈಲಟ್ ಮಾಡುವುದು, ಎಂಜಿನ್ ಅಥವಾ ಕಂಪಾರ್ಟ್ಮೆಂಟ್‌ಗಳನ್ನು ಸ್ಥಳಾಂತರಿಸುವುದು, ನಿಲ್ದಾಣವು ಕೊನೆಯ ತಾಣವಾಗಿರುವ ರೈಲುಗಳನ್ನು ಮುನ್ನಡೆಸುವುದು ಅಥವಾ ತಮ್ಮ ಮುಂದಿನ ಪ್ರಯಾಣವನ್ನು ಪ್ರಾರಂಭಿಸಲು ಇನ್ನೂ ಸಮಯ ಇರುವಂತಹ ಕಾರ್ಯಗಳಿಗೆ ಶಂಟಿಂಗ್ ಕರ್ತವ್ಯಗಳನ್ನು ವಹಿಸಲಾಗುತ್ತದೆ. ಶಂಟಿಂಗ್ ಸಿಬ್ಬಂದಿ ರೈಲುಗಳನ್ನು ಒಂದು ರೈಲ್ವೆ ನಿಲ್ದಾಣದಿಂದ ಇನ್ನೊಂದಕ್ಕೆ ಓಡಿಸುವುದಿಲ್ಲ. ಇಬ್ಬರು ಸಣ್ಣ ಮಕ್ಕಳನ್ನು ನೋಡಿಕೊಳ್ಳಬೇಕಾಗಿರುವುದರಿಂದ ರೈಲುಗಳನ್ನು ದೂರದ ಗಮ್ಯಸ್ಥಾನಗಳಿಗೆ ಪೈಲಟ್ ಮಾಡುವ ಕೆಲಸವನ್ನು ತನಗೆ ವಹಿಸಬಾರದೆಂದು ಇಲಾಖೆಗೆ ಮನವಿ ಮಾಡಿದ್ದಾರೆ. ಆದ್ದರಿಂದ ಆಕೆಗೆ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಕರ್ತವ್ಯ ನೀಡಲಾಗಿದೆ. ಇಂತಕ ಕಠಿಣ ಕೆಲಸಗಳನ್ನು ಗಂಡಸರೇ ಮಾಡಲು ಹಿಂದೆ ಮುಂದೆ ನೋಡುವಾಗ ಒಬ್ಬ ಮಹಿಳೆ ಇಂತಹ ಕೆಲಸ ನಿರ್ವಹಿಸುತ್ತಿರುವುದು ಸ್ತ್ರೀ ಕುಲಕ್ಕೇ ಹೆಮ್ಮೆ.