image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕದ ಮೊದಲ ಪತ್ರಕರ್ತೆ ಚಿ.ನ. ಮಂಗಳಾ...

ಕರ್ನಾಟಕದ ಮೊದಲ ಪತ್ರಕರ್ತೆ ಚಿ.ನ. ಮಂಗಳಾ...

ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ಜೀವನದ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಮೆಟ್ಟಿ ತನ್ನ ಪಥದಲ್ಲಿ ಮಿನುಗಿ, ಅದೆಷ್ಟೋ ಮಹಿಳೆಯರಿಗೆ ಆದರ್ಶ ಪ್ರಾಯರಾಗಿದ್ದಾರೆ. ಅಂತಹ ಮಹಿಳೆಯಲ್ಲಿ “ಕರಾವಳಿ ತರಂಗಿಣಿ”ಯ ಇಂದಿನ ಆಯ್ಕೆ ಕರ್ನಾಟಕದ ಮೊದಲ ಪತ್ರಕರ್ತೆ “ಚಿ.ನ. ಮಂಗಳಾ”. ಇವರು ಏಪ್ರಿಲ್ 1938ರಲ್ಲಿ ಬೆಂಗಳೂರಿನಲ್ಲಿ ಸಿ. ನರಸಿಂಹಮೂರ್ತಿ ಮತ್ತು ರಾಜೇಶ್ವರಿ ದಂಪತಿಗಳ ಮಗಳಾಗಿ ಜನಿಸಿದರು. ಇವರ ತಂದೆ ಸರ್ಕಾರಿ ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿದ್ದರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಪೂರೈಸಿದ ಮಂಗಳಾ ಅವರು ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸವನ್ನು ಮಂಡ್ಯದಲ್ಲಿ ಪೂರೈಸಿ, ಮುಂದೆ ಅವರು ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಹಾಗೂ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.ಆನರ್ಸ್ ಪದವಿ ಮತ್ತು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. ಪದವಿ. ಪದವಿಗಳನ್ನು ಗಳಿಸಿದರು. 1959ರ ವರ್ಷದಲ್ಲಿ ಅಧ್ಯಾಪಕಿಯಾಗಿ ಬೆಂಗಳೂರಿನ ಆಚಾರ್ಯ ಪಾಠಶಾಲಾ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಮುಂದೆ ಎನ್ ಎಮ್ ಕೆ ಆರ್ ವಿ ಕಾಲೇಜು ಎಂದು ಪ್ರಖ್ಯಾತವಾಗಿರುವ ರಾಷ್ಟ್ರೀಯ ಶಿಕ್ಷಣ ಟ್ರಸ್ಟ್ ಪ್ರಾರಂಭಿಸಿದ ನಾಗರತ್ನಮ್ಮ ಮೇಡಾ ಕಸ್ತೂರಿ ರಂಗಶೆಟ್ಟಿ ರಾಷ್ಟ್ರೀಯ ವಿದ್ಯಾಲಯದ ಮಹಿಳಾ ಕಾಲೇಜಿನ ಪ್ರಾಂಶುಪಾಲರ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇವರು ಕನ್ನಡದ ಮೊದಲ ಮಹಿಳಾ ಪತ್ರಕರ್ತೆ, ಸಾಹಿತಿ, ಪ್ರಕಾಶಕಿ, ತಿರುಮಲಾಂಬ ಅವರ ನೆನಪಿಗಾಗಿ ಶಾಶ್ವತಿ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ವಸ್ತು ಸಂಗ್ರಹಾಲಯ, ಮಹಿಳಾ ಅಧ್ಯಯನ ಕೇಂದ್ರಗಳ ಸ್ಥಾಪನೆಯೇ ಅಲ್ಲದೆ ಸಾಹಿತ್ಯ, ಸಂಶೋಧನೆ ಮತ್ತು ಸಮಾಜ ಕಾರ್ಯ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ಮಹಿಳೆಯರಿಗೆ ಈ ಸಂಸ್ಥೆಯ ವತಿಯಿಂದ ಸದೋದಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶಿಕ್ಷಣ ತಜ್ಞರಾಗಿ, ಸ್ತ್ರೀವಾದಿ ಚಿಂತಕರಾಗಿ, ಬರಹಗಾರರಾಗಿ ಹೆಸರಾಗಿದ್ದಾರೆ. ದೆಹಲಿಯ ಅಮೆರಿಕ ಶಿಕ್ಷಣ ಪ್ರತಿಷ್ಠಾನ, ವಾಷಿಂಗ್ ಟನ್ ವಿದ್ವಾಂಸರ ಅಂತಾರಾಷ್ಟ್ರೀಯ ವಿನಿಮಯ ಪರಿಷತ್ತು, ಬ್ರಿಟಿಷ್ ಕೌನ್ಸಿಲ್‌ಗಳ ಸಹಯೋಗ ದಿಂದ ವಿದೇಶದಲ್ಲಿನ ವಿದ್ಯಾಭ್ಯಾಸ ಪದ್ಧತಿ ಅಧ್ಯಯನ ಮಾಡಲು 1982ರಲ್ಲಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಪ್ರವಾಸ ಕೈಗೊಂಡು, 1984ರ ವರ್ಷದಲ್ಲಿ ಮತ್ತೆ ಅಮೆರಿಕ, ಇಂಗ್ಲೆಂಡ್ ಪ್ರವಾಸದ ಜೊತೆ ಯುರೋಪಿನ ಆಸ್ಟ್ರಿಯಾ, ಬೆಲ್ಜಿಯಂ, ಲಕ್ಸನ್‌ಬರ್ಗ, ಫ್ರಾನ್ಸ್, ಇಟಲಿ, ಸ್ವಿಟ್ಸರ್‌ಲೆಂಡ್ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಣ ಕ್ಷೇತ್ರದಿಂದ ಅಪಾರವಾದ ಅನುಭವಗಳನ್ನು ಹೊತ್ತು ತಂದರು. ಚಿ.ನ.ಮಂಗಳಾ ಅವರ ಬರಹಗಳಲ್ಲಿ ಅವರ ಸುದೀರ್ಘ ಅವಧಿಯ ಅಧ್ಯಾಪನ ಮತ್ತು ಪ್ರಾಂಶುಪಾಲ ಜವಾಬ್ಧಾರಿ ನಿರ್ವಹಣೆಯಲ್ಲಿ ದೊರೆತ ಅನುಭವಗಳು ವ್ಯಾಪಕವಾಗಿ ಸಂಚಲನಗೊಂಡಿವೆ. ಇವರ ‘ಭಾರತೀಯ ಸ್ತ್ರೀ’ ಲೇಖನ ಮಾಲಿಕೆ ಯಲ್ಲಿ ಅವರು ಹಲವಾರು ವಿದ್ವತ್ಪೂರ್ಣ ಲೇಖನಗಳನ್ನು ಸಹಾ ಪ್ರಸ್ತುತ ಪಡಿಸಿದ್ದಾರೆ. 'ಭಾರತೀಯ ಪರಿಕಲ್ಪನೆಯಲ್ಲಿ ಸರಸ್ವತಿ', ಕರ್ನಾಟಕದ ಮಹಿಳೆಯರು ಮಾಲಿಕೆಯಲ್ಲಿ 'ಆಧುನಿಕ ಕನ್ನಡ ಬರಹಗಾರ್ತಿಯರು' ಮುಂತಾದ ಹಲವಾರು ಪುಸ್ತಕಗಳು, ನ್ಯೂ ವರ್ಲ್ಡ್ ಲಿಟರೇಚರ್ ಸರಣಿಯ ಹಲವಾರು ಪುಸ್ತಕಗಳು, ಆರ್. ಕೆ. ನಾರಾಯಣರ ವೆಟಿಂಗ್ ಫಾರ್ ಮಹಾತ್ಮ ಪುಸ್ತಕದ ಅನುವಾದವಾದ ‘ಮಹಾತ್ಮರ ಬರವಿಗಾಗಿ’, 'ಹೆಲೆನ್ ಕೆಲರ್', 'ಅಭಾಗಿನಿ', 'ಹುಲಿಯ ಬೆನ್ನೇರಿದಾಗ', 'ಕೆನಡಾ ಕವನಗಳು', 'ಎಲ್ಲರೂ ನನ್ನವರು' ಮುಂತಾದವು ಚಿ. ನ. ಮಂಗಳಾ ಅವರ ವೈವಿಧ್ಯಪೂರ್ಣ ಬರಹಗಳಲ್ಲಿ ಸೇರಿವೆ. ಇವರನ್ನು ಹಲವಾರು ಪ್ರಶಸ್ತಿಗಳು ಅರಸಿ ಬಂದಿದೆ. ಚಿ ನ ಮಂಗಳಾ ಅವರು ಮೇ 30 1997ರಲ್ಲಿ ಇಹಲೋಕ ತ್ಯಜಿಸಿದರು. ಇಂತಹ ಮಹಾನ್ ಸಾಧಕಿಗೆ ಕರಾವಳಿ ತರಂಗಿಣಿ ನಮಿಸುತ್ತಿದೆ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ