ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ತನ್ನ ಜೀವನದ ಹಾದಿಯಲ್ಲಿ ಹಲವಾರು ಸಾದನೆಗಳನ್ನು ಮಾಡಿ ಇತರರಿಗೆ ಮಾದರಿಯಾಗುತ್ತಾಳೆ.ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿ ಇಂದಿನ ವಿಷೇಷ ಅತಿಥಿ ಟೈಗರ್ ಪ್ರಿನ್ಸೆಸ್ ಆಫ್ ಇಂಡಿಯಾ ಎಂದೇ ಖ್ಯಾತಿಯಾಗಿರುವ ಭಾರತೀಯ ವನ್ಯಜೀವಿ ಸಂರಕ್ಷಣಾಕಾರರಾಗಿರುವ ಲತಿಕಾ ನಾಥ್. ಇದರ ಜೊತೆ ಲೇಖಕಿಯೂ ಕೂಡ ಆಗಿರುವ ಲತಿಕಾ ನಾಥ್ ಅವರು ಪ್ರೊಫೆಸರ್ ಲಲಿತ್ ಎಂ ನಾಥ್ ಮತ್ತು ಮೀರಾನಾಥ್ ದಂಪತಿಗಳ ಮಗಳು. ಲಲಿತ್ ನಾಥ್ ಅವರು ಭಾರತೀಯ ವನ್ಯ ಜೀವಿ ಮಂಡಳಿಯಲ್ಲಿದ್ದರು. 1970 ರ ದಶಕದಲ್ಲಿ ಭಾರತದಲ್ಲಿ ಪ್ರಾಣಿ ಸಂರಕ್ಷಣಾ ಆಂದೋಲನವನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದ್ದರು. ಹಾಗಾಗಿ ಲತಿಕಾ ನಾಥ್ ತನ್ನ ಬಾಲ್ಯದ ಬಹುಪಾಲು ತನ್ನ ಹೆತ್ತವರೊಂದಿಗೆ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು.ಮುಂದೆ ಲತಿಕಾನಾಥ್ ಅವರು ದೆಹಲಿ ವಿಶ್ವವಿದ್ಯಾನಿಲಯದಿಂದ ಪರಿಸರ ವಿಜ್ಞಾನದಲ್ಲಿ ಪದವಿ ಪಡೆದರು ಮತ್ತು ಬ್ಯಾಂಗೋರ್‌ನ ನಾರ್ತ್ ವೇಲ್ಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ನಾರ್ತ್ ವೇಲ್ಸ್ ನಿಂದ ಗ್ರಾಮೀಣ ಸಂಪನ್ಮೂಲ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲು ಬ್ರಿಟಿಷ್ ಕೌನ್ಸಿಲ್‌ನಿಂದ ಚೆವೆನಿಂಗ್ ಪ್ರಶಸ್ತಿಯನ್ನು ಪಡೆದರು. ನಂತರ ಅವರು ಆಕ್ಸ್ಫರ್ಡ್ ಕ್ರೈಸ್ಟ್ ಚರ್ಚ್ ನ ಪ್ರಾಣಿಶಾಸ್ತ್ರ ವಿಭಾಗದ ವನ್ಯಜೀವಿ ಸಂರಕ್ಷಣಾ ಸಂಶೋಧನಾ ಘಟಕದಲ್ಲಿ ಪ್ರೊ. ಡೇವಿಡ್ ಮ್ಯಾಕ್ ಡೊನಾಲ್ಡ್ ಅವರ ಮಾರ್ಗದರ್ಶನದಲ್ಲಿ ತಮ್ಮ ಎ. ಫಿಲ್ ಪಡೆದರು . ಅವರು ವೈಲ್ಡ್ ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಸಂಶೋಧನಾ ಫೆಲೋಶಿಪ್ ನ್ನು ಪಡೆದರು ಮತ್ತು ಮಾನವ-ಆನೆಗಳ ಸಂಘರ್ಷ ಪರಿಹಾರ ಸಮಸ್ಯೆಗಳ ಬಗ್ಗೆ ಕೆಲಸ ಮಾಡಿದರು.
ಲತಿಕಾ ನಾಥ್ ಅವರು ವಿವಿಧ ಪ್ರಾಣಿ ಪ್ರಭೇದಗಳ (ಹುಲಿಗಳು, ಸಿಂಹಗಳು, ಚಿರತೆಗಳು, ಜಾಗ್ವಾರ್ಗಳು, ಹಿಮ ಚಿರತೆಗಳು, ಮೋಡದ ಚಿರತೆಗಳು, ಏಷ್ಯನ್ ಆನೆ, ಗಂಗಾ ಡಾಲ್ಫಿನ್, ಅರ್ನಾ ಅಥವಾ ಕಾಡು ನೀರಿನ ಎಮ್ಮೆ (ಬುಬಲಸ್ ಅರ್ನೀ) ಮತ್ತು ವಿವಿಧ ಪ್ರಾಣಿಗಳ ಛಾಯಾಚಿತ್ರಗಳನ್ನು ಚಿತ್ರಿಸಲು ಪ್ರಪಂಚದಾದ್ಯಂತ ಪ್ರಯಾಣಿಸಿದ್ದಾರೆ. ಅವುಗಳ ಸಂರಕ್ಷಣೆಗಾಗಿ ಶ್ರಮಿಸಿದ್ದಾರೆ. ಅವರು ತರುವಾಯ ಮಾನವ-ವನ್ಯಜೀವಿ ಸಂಘರ್ಷಗಳನ್ನು ಪರಿಹರಿಸಲು ಬುಡಕಟ್ಟು ಸಮುದಾಯಗಳೊಂದಿಗೆ ಕೆಲಸ ಮಾಡಿದರು. ಲತಿಕಾ ನಾಥ್ ಅವರು ಭಾರತದ ಟೈಗರ್ ಪ್ರಿನ್ಸೆಸ್ ಎನ್ನುವ ಬಿರುದನ್ನು ನ್ಯಾಷನಲ್ ಜಿಯಾಗ್ರಫಿಕ್ ಟೆಲಿವಿಷನ್‌ನಿಂದ ಪಡೆದಿದ್ದಾರೆ. ಲತಿಕಾ ಅವರು ಗೆರ್ರಿ ಮಾರ್ಟಿನ್ ಮತ್ತು ಹೃತಿಖ್ ರೋಶನ್ ಜೊತೆಗೆ ಭಾರತದಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಅನ್ನು ಪ್ರಾರಂಭಿಸುವ ಅಭಿಯಾನದ ಭಾಗವಾಗಿದ್ದರು.
ಇವರು ಹಲವಾರು ಕೃತಿಗಳನ್ನು ಬರೆದಿದ್ದಾರೆ. ಇವರ ಸಾಧನೆಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದೆ.ಇವರ ಮುಂದಿನ ಸಾಧನೆಯ ಹಾದಿ ಸುಗಮವಾಗಿ ಇರಲೆಂದು ಕರಾವಳಿ ತರಂಗಿಣಿ ಹಾರೈಸುತ್ತಿದೆ.
✍ ಲಲಿತಶ್ರೀ ಪ್ರೀತಂ ರೈ