image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಾನು ದೇವದಾಸಿಯಾಗಿ ಉಳಿದ ದೇವದಾಸಿಯರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಮಹಿಳೆ 'ಮಹಾದೇವಿ ಹುಲ್ಲೂರ'....

ತಾನು ದೇವದಾಸಿಯಾಗಿ ಉಳಿದ ದೇವದಾಸಿಯರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಮಹಿಳೆ 'ಮಹಾದೇವಿ ಹುಲ್ಲೂರ'....

ಹೆಣ್ಣೆಂದರೆ ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವವಳು. ಹೆಣ್ಣನ್ನು ಯಾವಾಗಲೂ ನದಿಗೆ ಹೋಲಿಸುತ್ತಾರೆ. ಕಾರಣ ಇಷ್ಟೇ ಇರಬಹುದು ಅವಳು ಹರಿದಲ್ಲೆಲ್ಲಾ ಹಚ್ಚ ಹಸಿರು ಮೈದುಂಬಿಗೊಳ್ಳುತ್ತದೆ. ಹಾಗೇ ಹೆಣ್ಣು ತಾನು ಹುಟ್ಟಿದ ಸ್ಥಳ ಇರಬಹುದು ಅಥವಾ ತಾನು ಬೆಳಗಲು ಹೊರಟ ಮನೆಯೇ ಇರಬಹುದು ಯಾವಾಗಲೂ ಸುಖ ಸಮೃದ್ದಿಯಿಂದ ತುಂಬಿ ತುಳುಕಬೇಕು ಎಂದು ಪ್ರಯತ್ನಿಸುತ್ತಾಳೆ. ಅದೇ ಅವಳ ಜೀವನದ ಗುರಿಯಾಗಿರುತ್ತದೆ. ಅಂತಹ ಹೆಣ್ಣು ಮಗಳು ತನ್ನ ಜೀವನದಲ್ಲಿ ಪಡುವ ಕಷ್ಟ ಅಷ್ಟಿಷ್ಟಲ್ಲ. ಹೆಣ್ಣನ್ನು ಈ ಸಮಾಜದ ಗಂಡು ಎಂದೆಂದಿಗೂ ಭೋಗದ ವಸ್ತುವಾಗಿಯೇ ನಡೆಸಿಕೊಂಡು ಬಂದಿರುವುದಕ್ಕೆ ನಮ್ಮಲ್ಲಿ ಹಲವಾರು ಉದಾಹರಣೆಗಳು ಸಿಗುತ್ತದೆ. ಹಿಂದಿನ ಕಾಲದಲ್ಲಿ ಹೆಣ್ಣು ಅಡುಗೆ ಮನೆಗೆ ಸೀಮಿತವಾಗಿರುವುದನ್ನು ನಾವು ನೋಡಿದ್ದೇವೆ. ಸದಾ ಗಂಡಿನ ಆಶ್ರಯದಲ್ಲಿ ಬದುಕುತ್ತಿದ್ದಳು. ಗಂಡಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಬದುಕುವ ಹಕ್ಕು ಅವಳಿಗಿರಲಿಲ್ಲ. ಹಾಗೂ ಅವಳು ಸ್ವತಂತ್ರವಾಗಿ ಬದುಕಲು ಇಚ್ಚೆ ಪಟ್ಟಳೆಂದರೆ ಅವಳನ್ನು ನೋಡುವ ಈ ಸಮಾಜದ ದೃಷ್ಟಿಯೇ ಬೇರೆ. ಹೆಣ್ಣು ಪರಿಸ್ಥಿತಿಯ ಕೈಗೊಂಬೆಯಾಗಿ ಈ ಸಮಾಜದಲ್ಲಿ ಪಡಬಾರದ ಪಾಡು ಪಟ್ಟು, ಮುಂದೆ ತನ್ನಂತೆ ಕಷ್ಟ ಪಟ್ಟ ಅಥವಾ ಕಷ್ಟ ಪಡುತ್ತಿರುವ ವಿವಿದ ರಂಗದಲ್ಲಿ ದುಡಿಯುತ್ತಿರುವ ಹೆಣ್ಣು ಮಕ್ಕಳಿಗಾಗಿ ದುಡಿ ಯುತ್ತಿರುವ ಮಹಿಳೆಯರನ್ನು ನಾವು ನೋಡಿರುತ್ತೇವೆ. ಅಂತಹ ಮಹಿಳೆಯರಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ ಬಸವನ ಬಾಗೆವಾಡಿಯ “ಮಹಾದೇವಿ ಹುಲ್ಲೂರ”.  ಬಡಕುಟುಂಬದಲ್ಲಿ ನಾಲ್ಕು ಜನ ಮಕ್ಕಳಲ್ಲಿ ಎರಡನೆಯವರಾಗಿ ಹುಟ್ಟಿ ಮೂರನೇ ತರಗತಿ ಓದಿ ತನ್ನ ಹನ್ನೆರಡನೇ ವಯಸ್ಸಿಗೆ ದೇವದಾಸಿ ಆದ ಇವರನ್ನು ಸ್ವತ: ತಂದೆ ತಾಯಿಯೇ ಬಡತನವನ್ನು ತಾಳಲಾರದೇ ಮಹರಾಷ್ಟ್ರದ ಕಾಮಾಟಿಪುರಕ್ಕೆ ಕಳುಹಿಸಿಸುತ್ತಾರೆ. ಸುಮಾರು 2 ವರ್ಷ ಆ ನರಕದಲ್ಲಿ ಕಷ್ಟ ಪಡುತ್ತಿದ್ದ ಈ ಪುಟ್ಟ ಬಾಲೆಯನ್ನು ಸವದತ್ತಿ ಜಾತ್ರೆ ಸಲುವಾಗಿ ಊರಿಗೆ ಕರೆದುಕೊಂಡು ಬಂದು ಮತ್ತೆ ಕಳಿಸಲಿಲ್ಲ. ಅಲ್ಲಿಂದ ಬಂದ ಕೆಲವೇ ದಿನಗಳಲ್ಲಿ ಮಹಾರಾಷ್ಟ್ರದ ಕಾಮಾಟಿಪುರದಲ್ಲಿ ಏಡ್ಸ್ ಶುರುವಾಗಿದೆ ಎನ್ನುವ ವದಂತಿ ಬಂದಾಗ, ಈ ಹೆಣ್ಣು ಮಗಳ ಮನಸ್ಸಿನಲ್ಲಿ ಮೂಡಿದ್ದೆ ತನ್ನಂತೆ ಇರುವ ಹೆಣ್ಣುಮಕ್ಕಳಿಗಾಗಿ ಒಂದು ಸಂಘವನ್ನು ಕಟ್ಟಬೇಕೆನ್ನುವ ಆಸೆ. ಅದೇ ಸಮಯಕ್ಕೆ ಇವರನ್ನು ಒಪ್ಪಿಸಿ ಇವರಂತಹ ಹೆಣ್ಣು ಮಕ್ಕಳಿಗಾಗಿ ಕೆಲಸ ಮಾಡುವ ಕೆಲಸವನ್ನು ಕೊಟ್ಟವರು ಜಿಲ್ಲಾಸ್ಪತ್ರೆಯ ಎಆರ್‌ಟಿ ವಿಭಾಗದ ಆಗಿನ ಸೀನಿಯರ್ ಕೌನ್ಸ್ಲರ್ ಆಗಿದ್ದ ರವಿ ಕಿತ್ತೂರ್‌ರವರು. ಅಂದಿನಿಂದ ಶುರುವಾದ ಇವರ ಪಯಣ ಇಂದು 5 ಜಿಲ್ಲೆಗಳಲ್ಲಿ ಇವರಂತೆಯೇ ಇರುವ ಹೆಣ್ಣು ಮಕ್ಕಳ ಆರೋಗ್ಯ, ಅವರ ಮಕ್ಕಳ ಶಿಕ್ಷಣ ಮುಂತಾದವುಗಳಿಗಾಗಿ ದುಡಿಯುತ್ತಿದ್ದಾರೆ. ಏಡ್ಸ್ ಜಾಗೃತಿ ಮಹಿಳಾ ಸಂಘ ಕಟ್ಟಿ ದುಡಿಯುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ನಿಗಮವೂ ಕೈ ಜೋಡಿಸಿ ಇಂತಹ ಮಹಿಳೆಯರಿಗೆ ಸ್ವಉದ್ಯೋಗ ಮಾಡುವುದಕ್ಕೂ ಸಾಲ ಸೌಲಭ್ಯ ಸಿಗುತ್ತಿದೆ. ಇವರ ಪರಿಶ್ರಮದ ಫಲವಾಗಿ ಇಂತಹ ಹೆಣ್ಣು ಮಕ್ಕಳ ಮಕ್ಕಳು ಒಳ್ಳೆಯ ವಿಧ್ಯಾಬ್ಯಾಸ ಪಡೆಯುತ್ತಿದ್ದಾರೆ. ಇನ್ನು ಕೆಲವು ಹೆಣ್ಣು ಮಕ್ಕಳು ಸ್ವಉದ್ಯೋಗದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿಯ ಕೈಗೊಂಬೆಯಾಗಿ ಮುಂದೆ ತನ್ನಂತವರಿಗಾಗಿ ದುಡಿಯುತ್ತಿರುವ ನೀವು ಮುಂದೆ ಹೆಣ್ಣು ಮಕ್ಕಳನ್ನು ಇಂತಹ ಪರಿಸ್ಥಿತಿಗೆ ತಳ್ಳುವವರ ವಿರುದ್ದವೂ ಹೋರಾಡುವಂತಾಗಲಿ ಎನ್ನುವುದು ಕರಾವಳಿ ತರಂಗಿಣಿಯ ಆಶಯ.

✍ ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ