ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ಜೀವನದ ಹಾದಿಯಲ್ಲಿ ನದಿ ಕಾಡು ಮೇಡುಗಳನ್ನು ಹಿಮ್ಮೆಟ್ಟಿ ಹರಿಯುವಂತೆ ಮುಂದೆ ಸಾಗುತ್ತಾಳೆ. ಹೆಣ್ಣು ಶ್ರೀಮಂತಳಾಗಿ ಹುಟ್ಟಿದಾಗ ಅವಳ ಹಾದಿ ಬಡ ಹೆಣ್ಣು ಮಕ್ಕಳಿಗಿಂತ ಸ್ವಲ್ಪ ಸುಗಮವಾಗಿ ಕಂಡರೂ ಮನೆಯಿಂದ ಹೊರಬಂದಾಗ ಅವಳು ಕಷ್ಟದ ಹಾದಿಯನ್ನು ತುಳಿಯಲೇ ಬೇಕಾಗುತ್ತದೆ. ಆದರೆ ಅದೆಂತಹ ಕಲ್ಲು ಮುಳ್ಳಿನ ಹಾದಿಯಿದ್ದರೂ ಮುನ್ನಡೆಯುವ ಚಲ ಹೆಣ್ಣಿನಲ್ಲಿರುವುದು ವಿಶೇಷ. ಅಂತಹ ಎಷ್ಟೋ ಹೆಣ್ಣು ಮಕ್ಕಳು ಇಂದು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಸಾದನೆಯ ಹಾದಿಯು ಬೇರೆ ಹೆಣ್ಣು ಮಕ್ಕಳಿಗೆ ದಾರಿ ದೀಪವಾಗಿದ್ದು ಕೂಡ ಇದೆ. ಅಂತಹ ಹೆಣ್ಣು ಮಕ್ಕಳಲ್ಲಿ ಕರಾವಳಿ ತರಂಗಿಣಿಯ ಇಂದಿನ ಆಯ್ಕೆ ಸ್ವಾತಂತ್ರ ಹೋರಾಟಗಾರ್ತಿ, ಗಾಂಧಿವಾದಿ “ಯಶೋಧರ ದಾಸಪ್ಪ”. ಯಶೋಧರ ದಾಸಪ್ಪ ಅವರು ಮೇ 28, 1905 ರಂದು ಬೆಂಗಳೂರಿನಲ್ಲಿ ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು. ಪ್ರಸಿದ್ಧ ಸಮಾಜ ಸೇವಕರಾದ ಕೆ.ಎಚ್.ರಾಮಯ್ಯ ಅವರ ಮಗಳಾದ ಇವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಸಾಮಾಜಿಕ ಕಾರ್ಯಕರ್ತೆಯಾಗಲು ಮತ್ತು ಭಾರತೀಯ ಸ್ವಾತಂತ್ರ‍್ಯ ಹೋರಾಟಕ್ಕೆ ಸೇರಲು ಬಯಸಿದವರು. ಮೊದಲಿಗೆ ಕುಟುಂಬದ ವಿರೋದವನ್ನು ಅನುಭವಿಸಿದ್ದರೂ ನಂತರದ ದಿನಗಳಲ್ಲಿ ಅವರಿಗೆ ಬೆಂಬಲ ದೊರಕಿತು. ಯಶೋಧರ ದಾಸಪ್ಪ ಒಬ್ಬ ಭಾರತೀಯ ಸ್ವಾತಂತ್ರ‍್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ, ಸಮಾಜ ಸುಧಾರಕರಾಗಿ ನಿಜಲಿಂಗಪ್ಪನವರ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಸಚಿವರಾಗಿದ್ದರು. ಲಂಡನ್ ಮಿಷನ್ ಶಾಲೆಯ ವಿದ್ಯಾರ್ಥಿಯಾಗಿದ್ದ ಇವರು ನಂತರ ಮದ್ರಾಸಿನ ಕ್ವೀನ್ ಮೇರಿ ಕಾಲೇಜಿನಲ್ಲಿ ಓದಿದ್ದ ಇವರು ಜವಾಹರಲಾಲ್ ನೆಹರು ಅವರ ಅಡಿಯಲ್ಲಿ ಸಚಿವರಾಗಿದ್ದ ಎಚ್‌ಸಿ ದಾಸಪ್ಪ ಅವರನ್ನು ವಿವಾಹವಾದರು. ಈ ದಂಪತಿಗಳ ಕಿರಿಯ ಪುತ್ರ ತುಳಸಿದಾಸ ದಾಸಪ್ಪ ಅವರು ಕೇಂದ್ರ ರಾಜ್ಯ ಸಚಿವರಾಗಿದ್ದರು. ಭಾರತೀಯ ಸ್ವಾತಂತ್ರ‍್ಯ ಹೋರಾಟದಲ್ಲಿ ಮತ್ತು 1930 ರ ಅರಣ್ಯ ಸತ್ಯಾಗ್ರಹ ಚಳುವಳಿಯಂತಹ ಹಲವಾರು ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಇವರನ್ನು ಆಂದೋಲನದಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲಿಗೆ ಹಾಕಲಾಯಿತು. ಇವರ ಮನೆಯು ಭೂಗತ ಸತ್ಯಾಗ್ರಹಿ (ಸ್ವಾತಂತ್ರ‍್ಯ ಸಂಗ್ರಾಮ) ಚಟುವಟಿಕೆಯ ಸಭೆಯಾಗಿತ್ತು. ಸ್ವಾತಂತ್ರ‍್ಯಕ್ಕಾಗಿ ಆಂದೋಲನ ನಡೆಸುತ್ತಿರುವ ಪ್ರತಿಭಟನಾಕಾರರ ವಿರುದ್ಧ ಕ್ರೂರತನಕ್ಕೆ ಹೆಸರು ವಾಸಿಯಾದ ಹ್ಯಾಮಿಲ್ಟನ್ ಅವರ ಹೆಸರನ್ನು ಕಟ್ಟಡಕ್ಕೆ ಹೆಸರಿಸಲು ನಿರ್ಧರಿಸಿದಾಗ ಅವರು ಸರ್ಕಾರದ ವಿರುದ್ಧ ಅನೇಕ ಆಕ್ರಮಣಕಾರಿ ಭಾಷಣಗಳನ್ನು ನೀಡಿದ್ದ ಹೆಗ್ಗಳಿಕೆ ಇವರದ್ದು. ನಿಜಲಿಂಗಪ್ಪ ಸಚಿವ ಸಂಪುಟದಲ್ಲಿ ಹಿರಿಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ನಿಷೇಧಾಜ್ಞೆ ತೆರವು ಮಾಡಿದ್ದನ್ನು ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸುದ್ದಿ ಮಾಡಿದ್ದರು. ಭಾರತ ಸರ್ಕಾರವು ಇವರು ಸಮಾಜಕ್ಕೆ ನೀಡಿದ ಕೊಡುಗೆಗಳಿಗಾಗಿ 1972 ರಲ್ಲಿ ಪದ್ಮಭೂಷಣದ ಮೂರನೇ ಅತ್ಯುನ್ನತ ನಾಗರಿಕ ಗೌರವವನ್ನು ನೀಡಿತು. ಅವರು 1980ರಲ್ಲಿ ನಿಧನರಾದರು. ಇಂತಹ ಮಹಾನ್ ಸ್ವಾತಂತ್ರ ಕರಾವಳಿ ತರಂಗಿಣಿ ನಮಿಸುತ್ತಿದೆ.
✍ಲಲಿತಶ್ರೀ ಪ್ರೀತಂ ರೈ