image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೀದಿ ನಾಯಿಗಳನ್ನು ತಾಯಿಯಂತೆ‌ ಪೊರೆಯುವ "ಶ್ರೀಮತಿ ರಜನಿ ಶೆಟ್ಟಿ"

ಬೀದಿ ನಾಯಿಗಳನ್ನು ತಾಯಿಯಂತೆ‌ ಪೊರೆಯುವ "ಶ್ರೀಮತಿ ರಜನಿ ಶೆಟ್ಟಿ"

ಹೆಣ್ಣು ಎಂದರೆ ಶಕ್ತಿಯ ಪ್ರತೀಕ. ಅವಳು ಜಗತ್ತಿನ ಎಲ್ಲಾ ಶಕ್ತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ಸದಾ ಕಾಲ ಎಲ್ಲರನ್ನೂ ಪ್ರೀತಿಯಿಂದ ಪೊರೆಯುವವಳು.  ಹೆಣ್ಣು ಪ್ರೀತಿ ವಿಶ್ವಾಸದ ಪ್ರತೀಕ, ಮನೆಯನ್ನು ಬೆಳಗುವ ಬೆಳಕು. ಹೆಣ್ಣೆಂದರೆ ಪ್ರಕೃತಿ. ಇನ್ನು ಹೆಣ್ಣಿಗೆ ಪ್ರಕೃತಿ, ಪ್ರಾಣಿ, ಪಕ್ಷಿಗಳಲ್ಲಿಯೂ ಎಲ್ಲಿಲ್ಲದ ಮಮಕಾರ. ಅವಳು ತನ್ನ ಸಾಕು ಪ್ರಾಣಿಗಳನ್ನೂ ಕೂಡ ತನ್ನ ಮಕ್ಕಳಂತೆ ಸಾಕಿ ಸಲಹುವುದನ್ನು ನಾವು ನೋಡಿರಬಹುದು. ಹಾಗೇಯೇ ಆ ಪ್ರಾಣಿಗಳು ಅವಳಲ್ಲಿ ತೋರುವ ಮಮಕಾರವೂ ಕೂಡ ಗಮನಾರ್ಹ. ಇನ್ನು ಹೆಣ್ಣು ತನ್ನ ಮನೆಯ ಸಾಕು ಪ್ರಾಣಿಗಳಿಗೆ ಮಾತ್ರ ಉಣಬಡಿಸಿ ಸಾಕಿ ಸಲಹುತ್ತಾಳೆ ಎನ್ನುವ ಹಾಗಿಲ್ಲ. ಎಷ್ಟೋ ಹೆಣ್ಣು ಮಕ್ಕಳು ತನ್ನ  ಬೀದಿ ಬದಿಯ ನಾಯಿಗಳಿಗೂ ಉಣಬಡಿಸಿ ಖುಷಿ ಪಡುವುದನ್ನು ನಾವು ನೋಡಿರುತ್ತೇವೆ. ಅಂತಹ ಹೆಣ್ಣು ಮಕ್ಕಳಲ್ಲಿ “ಕರಾವಳಿ ತರಂಗಿಣಿ”ಯ ಇಂದಿನ ಆಯ್ಕೆ “ಶ್ರೀಮತಿ ರಜನಿ ಶೆಟ್ಟಿ”. 

ರಜನಿಯವರು ಮೂಲತ: ಮಂಗಳೂರಿನ ಭವಂತಿ ಸ್ಟ್ರೀಟ್‌ನ ರಘುರಾಮ ಶೆಟ್ಟಿ ಮತ್ತು ರತ್ನಾ ಶೆಟ್ಟಿಯವರ ಇಬ್ಬರು ಮಕ್ಕಳಲ್ಲಿ ಮೊದಲನೆಯವರು. ಇವರು ಮಂಗಳೂರಿನವರಾಗಿದ್ದರೂ ಬೆಳೆದಿದ್ದು ದೂರದ ಮುಂಬೈನಲ್ಲಿ. ಇವರಿಗೆ ಚಿಕ್ಕ ವಯಸ್ಸಿನಿಂದಲೂ ಪ್ರಾಣಿಗಳೆಂದರೆ ಎಲ್ಲಿಲ್ಲದ ಪ್ರೀತಿ. ತನ್ನ ಶಾಲೆಯ ಅಕ್ಕ ಪಕ್ಕದಲ್ಲಿದ್ದ ಬೀದಿ ಬದಿಯ ನಾಯಿಗಳಿಗೆ ತನ್ನಲ್ಲಿರುವ ತಿಂಡಿ ತಿನಿಸುಗಳನ್ನು ತಿನ್ನಿಸಿ ಖುಷಿ ಪಡುತ್ತಿದ್ದ ಇವರು ಮಂಗಳೂರಿನ ಎಂಟ್ನೂರಕ್ಕೂ ಹೆಚ್ಚು ಬೀದಿನಾಯಿಗಳಿಗೆ ಉಣಬಡಿಸುತ್ತಿದ್ದಾರೆ ಎಂದಾಗ ಆಶ್ಚರ್ಯವಾದರೂ ಇದು ಸತ್ಯ. ಹೌದು ರಜನಿಯವರು 24 ವರ್ಷಗಳ ಹಿಂದೆ ದಾಮೋದರ ಶೆಟ್ಟಿಯವರನ್ನು ಮದುವೆಯಾಗಿ ಮಂಗಳೂರಿಗೆ ಬಂದರು. ವಿಶೇಷ ಎಂದರೆ ದಾಮೋದರ ಶಟ್ಟಿಯವರು ಕೂಡ ಪ್ರಾಣಿ ಪ್ರೀಯರೇ ಆಗಿರುವುದರಿಂದ ಹೆಂಡತಿಯ ಕಾರ್ಯಕ್ಕೆ ಪೂರ್ಣ ಸಹಕಾರ ನೀಡುತ್ತಿದ್ದಾರೆ. ಅದರೊಂದಿಗೆ ಈ ದಂಪತಿಗಳ ಮೂರು ಮಕ್ಕಳು ಕೂಡ ತಾಯಿಯ ಆಸಕ್ತಿಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ಬೀದಿ ನಾಯಿಗಳಿಗೆ ಉಣಬಡಿಸಲು ದಿನವೊಂದಕ್ಕೆ ಅರವತ್ತರಿಂದ ಎಪ್ಪತ್ತು ಕೆ.ಜಿ ಅಕ್ಕಿಯನ್ನು ಉಪಯೋಗಿಸುತ್ತಾರಂತೆ.

ಅದರೊಂದಿಗೆ ಹಾಲು, ಮೊಟ್ಟೆ, ಕೋಳಿಗಳ ಜೊತೆಗೆ ಅವಶ್ಯವಿದ್ದಾಗ ಅವುಗಳ ಆರೋಗ್ಯಕ್ಕಾಗಿ ಔಷದಿಯನ್ನೂ  ಸೇರಿಸಲಾಗುತ್ತದೆ. ರಜನಿಶಟ್ಟಿಯವರನ್ನು ಮಾತಾಡಿಸುತ್ತಾ “ಇವರಿಗೆ ಸನ್ಮಾನ ಮಾಡುವುದಾದರೆ ಶಾಲು, ಸ್ಮರಣಿಕೆಯ ಬದಲಿಗೆ ಅದೇ ದುಡ್ಡಿನಲ್ಲಿ ನಾಯಿಗಳಿಗೆ ಆಹಾರ ಕೊಟ್ಟರೆ ಖುಷಿ ಪಡುತ್ತಾರೆ” ಅನ್ನಿಸಿತು. ಬೀದಿ ನಾಯಿಗಳಿಗೆ ಉಣಬಡಿಸುವುದು ಮಾತ್ರ ಅಲ್ಲದೆ ಪ್ರಾಣಿಗಳು ಅಪಘಾತಕ್ಕೊಳಗಾಗಿ, ಅಥವಾ ಆಪತ್ತಿನಲ್ಲಿ ಸಿಲುಕಿಕೊಂಡರೆ ತನ್ನ ಜೀವದ ಹಂಗು ತೊರೆದು ಅವುಗಳನ್ನು ರಕ್ಷಿಸಿರುವ ಉದಾಹರಣೆಗಳೂ ಕೂಡ ಇದೆ. ಪ್ರಾಣಿಗಳು ಆಪತ್ತಿನಲ್ಲಿದ್ದಾಗ ನನಗಾಗಿ ಕಾಯುವ ಬದಲು ನೀವೇ ಅದರ ರಕ್ಷಣೆ ಮಾಡಿ ಅಂತ ಅವರು ಜನರಲ್ಲಿ ಕಳಕಳಿಯಿಂದ ವಿನಂತಿಸುವುದನ್ನು ಮರೆಯುವುದಿಲ್ಲ. ಇಂತಹ ಮಾನವೀಯ ಮೌಲ್ಯಗಳೊಡನೆ ಬದುಕುತ್ತಿರುವ ಇವರಿಗೆ ಸಂಘ ಸಂಸ್ಥೆಗಳು ಸಕಾರಾತ್ಮಕವಾಗಿ ಸಹಕರಿಸಬೇಕಾಗಿದೆ. ಕೊರೋನಾ ಸಮಯದಲ್ಲಿ ಒಂದು ಕೆ.ಜಿ ತರಕಾರಿ ಬಡವರಿಗೆ ಕೊಟ್ಟು ಅದರ ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ನಾಯಕರ ತರ ಪೋಸು ಕೊಟ್ಟವರ ಮುಂದೆ ಯಾವುದೇ ಫಲಾಪೇಕ್ಷೆ ಇಲ್ಲದೇ ಬೀದಿ ನಾಯಿಗಳಿಗೆ ಉಣಬಡಿಸುವ ಇವರನ್ನು ನಮ್ಮ ಸರಕಾರ ಗುರುತಿಸಿದರೆ ಅದರಿಂದ ಬರುವ ಬಹುಮಾನದ ಮೊತ್ತವೂ ಕೂಡ ಬೀದಿ ನಾಯಿಗಳಿಗೆ ಆಹಾರವಾಗುತ್ತದೆ. ಪ್ರಾಣಿ ಪ್ರೀಯರು ಇವರ ಕಾರ್ಯಕ್ಕೆ ಸಹಕರಿಸಿ, ಇನ್ನಷ್ಟು ಬೀದಿನಾಯಿಗಳಿಗೆ ಆಹಾರ ದೊರಕುವಂತಾಗಲಿ ಎನ್ನುವುದು ಕರಾವಳಿ ತರಂಗಿಣಿಯ ಹಾರೈಕೆ.

Category
ಕರಾವಳಿ ತರಂಗಿಣಿ