ಒಂದು ಮನೆಯಲ್ಲಿ ಹುಟ್ಟಿ ಇನ್ನೊಂದು ಮನೆ ಬೆಳಗುವ ಹೆಣ್ಣು ತ್ಯಾಗಮಯಿಯಾಗಿ ಅಂದಿನಿಂದ ಇಂದಿನವರೆಗೂ ಸಮಾಜದ ಮುಂದಿದ್ದಾಳೆ. ಅಂತಹ ಹೆಣ್ಣು ಮಕ್ಕಳಲ್ಲಿ ಭಾರತದ ಮೊದಲ ಅಶೋಕ ಚಕ್ರ ಪುರಸ್ಕೃತ ಭಾರತೀಯ ಗಗನಸಖಿ ನೀರಜಾ ಭಾನೋಟ್ ಕರಾವಳಿ ತರಂಗಿಣಿಯ ಇಂದಿನ ವಿಶೇಷ ಅತಿಥಿ. ಹರೀಶ್ ಭಾನೋಟ್ ಮತ್ತು ರಮಾ ಭಾನೋಟ್ ದಂಪತಿಗಳ ಇಬ್ಬರು ಗಂಡುಮಕ್ಕಳ ಬಳಿಕ ಮಗಳಾಗಿ ಚಂದೀಘಡದಲ್ಲಿ ಸೆಪ್ಟೆಂಬರ್ 07, 1962 ರಂದು ನೀರಜಾ ಭಾನೋಟ್ ಜನಿಸಿದರು. ಹರೀಶ್‌ರವರಿಗೆ ಮುಂಬೈ ನಗರಕ್ಕೆ ವರ್ಗವಾದ ಕಾರಣ ನೀರಜಾ ಮುಂಬೈನ ಸೇಂಟ್ ಝೇವಿಯರ್ಸ್ ಕಾಲೇಜ್ ನಲ್ಲಿ ತಮ್ಮ ಪದವಿ ಮುಗಿಸಿದಾಗ ಅವರ ವಯಸ್ಸು ಕೇವಲ 17 ವರ್ಷ. ಆಗಲೇ ಮುಂಬೈನ ಪ್ರಸಿದ್ಧ ದಿನಪತ್ರಿಕೆಯೊಂದು ನೀರಜಾ ಒಬ್ಬ ಅಪ್ರತಿಮ ಸುಂದರಿಯೆಂದು ವರದಿ ಮಾಡಿತ್ತು. ಹಾಗಾಗಿ ಪದವಿಯ ನಂತರ ಭಾನೋಟ್ ಅನೇಕ ಜಾಹಿರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡಿದರು. 22ನೇ ವಯಸ್ಸಿನಲ್ಲಿ ಹಿರಿಯರಲ್ಲಾ ನೋಡಿ ಮೆಚ್ಚಿದ ಅನುರೂಪವರನೊಂದಿಗೆ ವಿವಾಹವೂ ನಡೆಯಿತು.
ಕೇವಲ 5 ತಿಂಗಳು ಪತಿಯೊಡನೆ ಸಂಸಾರ ಮಾಡಿದ ನೀರಜಾ, ಶಾರ್ಜಾದಲ್ಲಿದ್ದು ಅನಂತರ ಮುಂಬೈಗೆ 'ಚಾರ್ಮಿಸ್‌ಕ್ರೀಮ್' ಜಾಹಿರಾತಿನ ಒಪ್ಪಂದದ ಕೊನೆಯ ಹಂತದ ಚಿತ್ರೀಕರಣಕ್ಕೆ ಬಂದಾಗ, ಆ ವಾರದ ಕೊನೆಯಲ್ಲೇ ಪತಿಯಿಂದ ಒಂದು ಆಘಾತಕರ ಪತ್ರ ಬಂದಿತ್ತು. ಅದರಲ್ಲಿ, ನಾನು ಬರೆದಿರುವ ನಿಯಮಗಳನ್ನು ಒಪ್ಪುವ ಹಾಗಿದ್ದರೆ ಸೊಲ್ಲೆತ್ತದೆ ಹಿಂದಿರುಗಿ ಬಾ, ಇಲ್ಲದೆ ಹೋದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದೇನೆ, ಲೆಟ್ ಅಸ್ ಸಪರೇಟ್, ಎಂಬ ಒಕ್ಕಣಿಕೆಯೊಂದಿಗೆ ಪತ್ರ ಅಂತ್ಯಗೊಂಡಿತ್ತು. ಮಾನಸಿಕ ಸಾಂಗತ್ಯ, ಮಧುರ ಭವಿಷ್ಯದ ಭರವಸೆ ನೀಡದ ಮದುವೆಯ ಬಂಧನದಿಂದ ಹೊರ ಬರಲು ನೀರಜಾ ಬಯಸಿ, 'ವಿವಾಹ ವಿಚ್ಛೇದನ'ಕ್ಕೆ ಒಪ್ಪಿಗೆಯ ಸಹಿ ಹಾಕಿದರು.
ನಂತರ ಸೆಪ್ಟೆಂಬರ್ 1985ರಲ್ಲಿ ಅಮೆರಿಕದ 'ಪ್ಯಾನ್ ಅಮೆರಿಕನ್ ವಿಮಾನದ ಫ್ಲೈಟ್ ಅಟೆಂಡೆಂಟ್' ಪದವಿಗೆ ಅರ್ಜಿ ಸಲ್ಲಿಸಿದರು. ಸುಮಾರು 10 ಸಾವಿರ ಅಭ್ಯರ್ಥಿಗಳಲ್ಲಿ ಆಯ್ಕೆಯಾದ ಕೊನೆಯ 80 ಜನ ಮಹಿಳೆಯರಲ್ಲಿ “ನೀರಜಾ ಭಾನೋಟ್” ಒಬ್ಬರಾಗಿ ತರಬೇತಿಗೆ ಆಯ್ಕೆಯಾಗಿದ್ದರು. ಅಮೆರಿಕದ ಮಯಾಮಿಯಲ್ಲಿ ಜರುಗಿದ ತರಬೇತಿಯಲ್ಲಿ ಜಯಗಳಿಸಿದ ಅವರನ್ನು ಚೀಫ್ ಫ್ಲೈಟ್ ಪರ್ಸರ್ ಆಗಿ ನೇಮಿಸಿದರು. 'ಟೆರರಿಸಂ ವಿರುದ್ಧದ ಟ್ರೈನಿಂಗ್' ನಲ್ಲೂ ಅವರಿಗೆ ಸಾಕಷ್ಟು ತರಬೇತಿ ನೀಡಲಾಗಿತ್ತು. 'ಮುಂದಾಳತ್ವದ ಗುಣ' ಅವರಿಗೆ ಬಹಳ ಸಹಾಯಕವಾಯಿತು. 12 ಜನ ಮಹಿಳೆಯರು/ಪುರುಷರನ್ನೊಳಗೊಂಡ ಟೀಮ್‌ನ ಉಸ್ತುವಾರಿಯ ಜವಾಬ್ದಾರಿ ಅವರ ಹೆಗಲ ಮೇಲಿತ್ತು. ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ಬಂಧಿತವಾಗಿದ್ದ ಪ್ಯಾನ್ ಅಮೆರಿಕನ್ ವಿಮಾನದ ಪರಿಚಾರಿಕೆಯಾಗಿದ್ದ ನೀರಜಾರವರ ಹಣೆಗೆ ಗುಂಡಿಟ್ಟು ನಿಂತಿದ್ದ 4 ಜನ ಭಯೋತ್ಪಾದಕರಿಂದ 300ಕ್ಕೂ ಅಧಿಕ ಮಂದಿ ಪ್ರಯಾಣಿಕರಿಗೆ ಪುನರ್ಜನ್ಮ ಕೊಟ್ಟು ತಮ್ಮ ಜೀವವನ್ನೇ ಆಹುತಿಯಾಗಿ ಅರ್ಪಿಸಿದರು. ನೀರಜಾ ಭಾನೋಟ್, ತಮ್ಮ 24ನೇ ವರ್ಷದ ಹುಟ್ಟುಹಬ್ಬದಂದು ಈ ಶೌರ್ಯದ ಕಾರ್ಯವೆಸಗಿ ಅಮರರಾದರು. ಎಲ್ಲರಿಗಿಂತ ಮೊದಲೇ ಈ ಜಾಲದಿಂದ ತಪ್ಪಿಸಿಕೊಳ್ಳುವ ಸುವರ್ಣಾವಕಾಶವಿದ್ದಾಗ್ಯೂ ನೀರಜಾ ತಮ್ಮ ಜೀವವನ್ನು ಒತ್ತೆಯಾಗಿಟ್ಟು ಎಲ್ಲರಿಗೂ ಮಾದರಿಯಾದ ದಿಟ್ಟ ಮಹಿಳೆಯ ತ್ಯಾಗಕ್ಕೆ ಕರಾವಳಿ ತರಂಗಿಣಿ ಶಿರಬಾಗಿ ನಮಿಸುತ್ತಿದೆ.
✍ ಲಲಿತಶ್ರೀ ಪ್ರೀತಂ ರೈ