image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಾಲಕ್ಕಿ ಹಾಡುಗಳ ಕೋಗಿಲೆ "ಸುಕ್ರಿ ಬೊಮ್ಮನಗೌಡ"

ಹಾಲಕ್ಕಿ ಹಾಡುಗಳ ಕೋಗಿಲೆ "ಸುಕ್ರಿ ಬೊಮ್ಮನಗೌಡ"

ಇಂದಿನ ಆದುನಿಕ ಯುಗದಲ್ಲಿ ಹೆಣ್ಣು ಏನಾದರೂ ಸಾದಿಸಿದ್ದಾಳೆ, ಸಾದಿಸುತ್ತಿದ್ದಾಳೆ ಎಂದರೆ ಅದು ಅಂತಹ ದೊಡ್ಡ ಸಾಧನೆ ಎನಿಸಿಕೊಳ್ಳುವುದಿಲ್ಲ. ಕಾರಣ ಈಗ ಹೆಣ್ಣು ಗಂಡಿನ ಜೊತೆ ಸರಿ ಸಮಾನವಾಗಿ ಮನ್ನಡೆಯುತ್ತಿದ್ದಾಳೆ. ಆದರೆ ಹಿಂದಿನ ಕಾಲದಲ್ಲಿ ಹಾಗಿರಲಿಲ್ಲ, ಹೆಣ್ಣೆಂದರೆ ಅನಿಷ್ಟ ಎಂದು ತಿಳಿದುಕೊಳ್ಳುತ್ತಿದ್ದ ಸಮಯದಲ್ಲೂ, ಶೈಕ್ಷಣಿಕ ಜ್ಞಾನದ ಹಂಗಿಲ್ಲದೆ, ತನಗೆ ಒಳಿದು ಬಂದ ಹಾಡು, ಹಸೆಯ ಮೂಲಕ ಪ್ರಸಿದ್ದರಾದವರನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಇಂದು ಅಂತವರನ್ನು ಗುರುತಿಸಿ ಸನ್ಮಾನಿಸುವ ಮಹಾತ್ಕಾರ್ಯವೂ ಆಗುತ್ತಿದೆ. ಅಂತಹ ಸಾದಕರಲ್ಲಿ ಕರಾವಳಿ ತರಂಗಿಣಿಯ ಇಂದಿನ ಅತಿಥಿ “ಸುಕ್ರಿ ಬೊಮ್ಮು ಗೌಡ” ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿರುವ ಈಕೆ ಓರ್ವ ಪದ್ಮಶ್ರೀ ಪುರಸ್ಕ್ರತ ಜಾನಪದ ಸಂಗೀತ ಸಾಧಕಿ. ಮೂಲತ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಬಡಗೇರಿಯವರಾದ ಇವರಿಗೆ ಸುಮಾರು 90 ವರ್ಷ ವಯಸ್ಸಿರಬಹುದು. ಸುಕ್ರಜ್ಜಿಯು ಜಾನಪದ ಹಾಲಕ್ಕಿ ಹಾಡನ್ನು ಹಾಡುವಲ್ಲಿ ಪ್ರಸಿದ್ಧಿಗೊಂಡವರು. ಸುಕ್ರಜ್ಜಿಯ ನೆನಪಿನಲ್ಲಿ ಸುಮಾರು 5000 ಹಾಲಕ್ಕಿ ಹಾಡುಗಳಿವೆ ಮತ್ತು ಅದರಲ್ಲಿ ಹಲವು ನೂರು ವರ್ಷಕ್ಕಿಂತಲೂ ಹಳೆಯದಾಗಿದೆ. ಸಾವಿರಾರು ಹಾಲಕ್ಕಿ ಹಾಡುಗಳನ್ನು ಹೇಳುವ ಇವರು ಹಾಲಕ್ಕಿ ಹಾಡುಗಳ ಕೋಗಿಲೆ ಎಂದು ಪ್ರಖ್ಯಾತಗೊಂಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ ಸುಕ್ರಜ್ಜಿಯವರ ಹಾಡುಗಳನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿಟ್ಟಿದೆ. ಅಲ್ಲದೇ ಕಾರವಾರದಲ್ಲಿನ ಅಖಿಲ ಭಾರತ ರೇಡಿಯೋ ಕೂಡಾ ಅವರ ಹಾಡುಗಳನ್ನು ಧ್ವನಿಮುದ್ರಣ ಮಾಡಿದೆ ಮತ್ತು ಅವುಗಳನ್ನು ಅದರ ಗ್ರಂಥಾಲಯದಲ್ಲಿ ಸಂರಕ್ಷಿಸಲಾಗಿದೆ. ಸುಕ್ರಜ್ಜಿ 14 ವರ್ಷ ವಯಸ್ಸಿನಲ್ಲಿದ್ದಾಗ 42 ವರ್ಷದ ಬೊಮ್ಮು ಗೌಡರ ಜೊತೆ ವಿವಾಹವಾಗುತ್ತದೆ. ಕುಡಿತದ ವ್ಯಸನದಿಂದ ಸಂಭವಿಸಿದ ಗಂಡನ ಸಾವಿನಿಂದ ಧೃತಿಗೆಡದ ಸುಕ್ರಜ್ಜಿಯು 1990 ದಶಕದಲ್ಲಿ ಮದ್ಯ ವಿರೋಧಿ ಆಂದೋಲನವನ್ನು ನಡೆಸಿದರು. ಈ ಆಂದೋಲನವು ಹಳ್ಳಿಯ ಸ್ಥಳೀಯ ಸಾರಾಯಿ ಮಳಿಗೆಗಳ ಮುಚ್ಚುವಿಕೆಗೆ ಕಾರಣವಾಯಿತು. 1980 ರ ದಶಕದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಮತ್ತು ಮಾಜಿ ಉಪಕುಲಪತಿ ಎಚ್. ಸಿ. ಬೋರಲಿಂಗಯ್ಯ ಅವರು ಬಡಗೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ, ಅವರ ಪ್ರತಿಭೆಯನ್ನು ಗಮನಿಸಿ ಧಾರವಾಡ ಆಕಾಶವಾಣಿ ಕೇಂದ್ರದ ಬನಂದೂರು ಕೆಂಪಯ್ಯರಿಗೆ ತಿಳಿಸಿದರು. ಹೀಗೆ ಹಾಲಕ್ಕಿ ಸಮುದಾಯದ ಕೋಗಿಲೆಯ ಸಂಗೀತದ ಜೀವನವು ಪ್ರಾರಂಭವಾಯಿತು. ಇವರನ್ನು ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿದೆ. ಅದರಲ್ಲಿ ಜಾನಪದ ಶ್ರೀ ಪ್ರಶಸ್ತಿ-1999, ನಾಡೋಜ ಪ್ರಶಸ್ತಿ-2006, ಸಂದೇಶ ಕಲಾ ಪ್ರಶಸ್ತಿ-2009, ಆಳ್ವಾಸ್ ನುಡಿಸಿರಿ ಪ್ರಶಸ್ತಿ-2009 ಮೊದಲಾದವುಗಳು ಸೇರಿವೆ. ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎನ್ನುವ ಹೋರಾಟ, ಮದ್ಯ ವಿರೋಧಿ ಆಂದೋಲನ ಮತ್ತು ಸಾವಿರಾರು ಜಾನಪದ ಗೀತೆಗಳ ಹಾಡುವಿಕೆಯು ಸುಕ್ರಜ್ಜಿಗೆ ಜನಪ್ರಿಯತೆಯನ್ನು ಮಾತ್ರವಲ್ಲದೇ, ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು 1017ರಲ್ಲಿ ತಂದುಕೊಟ್ಟಿದೆ. 90ರ ಅಂಚಿನಲ್ಲಿರುವ ಸುಕ್ರಜ್ಜಿ ಈಗ ವಯೋಸಹಜ ಅನಾರೋಗ್ಯ ಕಾಡುತ್ತಿದೆ. ಆ ದೇವರು ಅವರಿಗೆ ಆಯುರಾರೋಗ್ಯವನ್ನು ಕರುಣಿಸಲಿ ಎನ್ನುವುದು ಕರಾವಳಿ ತರಂಗಿಣಿಯ ಪ್ರಾರ್ಥನೆ.

✍ಲಲಿತಶ್ರೀ ಪ್ರೀತಂ ರೈ

Category
ಕರಾವಳಿ ತರಂಗಿಣಿ