image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸುಡಾನ್​ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 30 ಲಕ್ಷ ಜನರು ದೇಶದಿಂದ ಪಲಾಯನ

ಸುಡಾನ್​ನಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 30 ಲಕ್ಷ ಜನರು ದೇಶದಿಂದ ಪಲಾಯನ

ವಿಶ್ವಸಂಸ್ಥೆ: ಸುಡಾನ್​ನಲ್ಲಿ ಕಳೆದ 18 ತಿಂಗಳಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಸುಮಾರು 30 ಲಕ್ಷ ನಿರಾಶ್ರಿತರು ಹಾಗೂ ದೇಶಕ್ಕೆ ಮರಳಿ ಬಂದಿದ್ದವರು ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ತಿಳಿಸಿದೆ. ಜೀವದ ಸುರಕ್ಷತೆಯನ್ನು ಹುಡುಕಿಕೊಂಡು ಇವರಲ್ಲಿ ಬಹುತೇಕರು ಮುಖ್ಯವಾಗಿ ಮಧ್ಯ ಆಫ್ರಿಕನ್ ಗಣರಾಜ್ಯ, ಚಾಡ್, ಈಜಿಪ್ಟ್, ಇಥಿಯೋಪಿಯಾ, ಲಿಬಿಯಾ, ದಕ್ಷಿಣ ಸುಡಾನ್ ಮತ್ತು ಉಗಾಂಡಾಕ್ಕೆ ತೆರಳಿದ್ದಾರೆ.

ಸುಡಾನ್​ನ ಹಲವಾರು ಭಾಗಗಳಲ್ಲಿ ಸಂಘರ್ಷದಿಂದ ಜನರು ಸ್ಥಳಾಂತರಗೊಳ್ಳುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡಾರ್ಫುರ್​ನಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷದಿಂದಾಗಿ, ಅಕ್ಟೋಬರ್ ಮೊದಲ ವಾರದಲ್ಲಿ ಸುಮಾರು 25,000 ಜನರು ಪೂರ್ವ ಚಾಡ್​ಗೆ ತೆರಳಿದ್ದಾರೆ. ಇದು 2024 ರಲ್ಲಿ ಪೂರ್ವ ಚಾಡ್​ಗೆ ಒಂದೇ ವಾರದಲ್ಲಿ ಅತಿ ಹೆಚ್ಚಿನ ವಲಸೆಯಾಗಿದೆ. ಚಾಡ್​ನಲ್ಲಿ ಸುಮಾರು 6,81,944 ಸುಡಾನ್ ನಿರಾಶ್ರಿತರು ಸದ್ಯ ಆಶ್ರಯ ಪಡೆದುಕೊಂಡಿದ್ದಾರೆ. ಬೇರೆ ಯಾವುದೇ ದೇಶಕ್ಕಿಂತ ಚಾಡ್​ನಲ್ಲಿ ಅತ್ಯಧಿಕ ಸುಡಾನ್ ನಿರಾಶ್ರಿತರಿದ್ದಾರೆ ಎಂದು ಒಸಿಎಚ್ಎ ತಿಳಿಸಿದೆ.

ನಾಗರಿಕರ ರಕ್ಷಣೆ ಮತ್ತು ಪರಿಹಾರ ಸಾಮಗ್ರಿಗಳ ಪೂರೈಕೆಗೆ ಅನುಕೂಲ ಮಾಡಿಕೊಡಲು ಸಂಘರ್ಷವನ್ನು ನಿಲ್ಲಿಸಬೇಕೆಂದು ಹೋರಾಟ ನಿರತ ಎಲ್ಲ ಗುಂಪುಗಳಿಗೆ ಒಸಿಎಚ್ಎ ಮನವಿ ಮಾಡಿದೆ. ಮಳೆ ಕಡಿಮೆಯಾಗುತ್ತಿರುವುದರಿಂದ ಮತ್ತು ಬಹುತೇಕ ರಸ್ತೆಗಳು ಈಗ ಸಂಚಾರಕ್ಕೆ ಯೋಗ್ಯವಾಗಿರುವುದರಿಂದ ಅವಶ್ಯವಿರುವ ಸ್ಥಳಗಳಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸಲು ಇದು ಸೂಕ್ತ ಸಮಯವಾಗಿದೆ ಎಂದು ಒಸಿಎಚ್ಎ ಹೇಳಿದೆ. ಜುಲೈ ಮಧ್ಯಭಾಗದಿಂದ ಈವರೆಗೆ ದೇಶದಲ್ಲಿ 24 ಸಾವಿರಕ್ಕೂ ಹೆಚ್ಚು ಕಾಲರಾ ಪ್ರಕರಣಗಳು ವರದಿಯಾಗಿದ್ದು, ಕಾಲರಾದಿಂದ ಸುಮಾರು 700 ಜನ ಸಾವಿಗೀಡಾಗಿದ್ದಾರೆ ಎಂದು ಒಸಿಎಚ್ಎ ತಿಳಿಸಿದೆ.

Category
ಕರಾವಳಿ ತರಂಗಿಣಿ