ಉತ್ತರಪ್ರದೇಶ: ಗುವಾಹಟಿಯಿಂದ ಜಮ್ಮುವಿಗೆ ತೆರಳುತ್ತಿದ್ದ ಸೇನಾ ವಿಶೇಷ ರೈಲು ಮಂಗಳವಾರ ರಾತ್ರಿ 10:00 ಗಂಟೆ ಸುಮಾರಿಗೆ ಉತ್ತರಪ್ರದೇಶದ ಗೋರಖ್‌ಪುರದ ಕ್ಯಾಂಟ್ ರೈಲು ನಿಲ್ದಾಣದ ಯಾರ್ಡ್‌ನಲ್ಲಿ ಹಳಿತಪ್ಪಿದೆ. ಇದರಿಂದಾಗಿ ಗೋರಖ್‌ಪುರ - ನರ್ಕಟಿಯಾಗಂಜ್ ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಸಂಬಂಧಪಟ್ಟ ರೈಲ್ವೆ ಅಧಿಕಾರಿಗಳು, ನೌಕರರು ಹಾಗೂ ಭದ್ರತಾ ಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರೈಲನ್ನು ಹಳಿ ಮೇಲೆ ತರುವ ಪ್ರಯತ್ನ ಮಾಡಿದರು.
ಸುಮಾರು 4 ಗಂಟೆಗಳ ನಂತರ ಹಳಿ ತಪ್ಪಿದ ರೈಲನ್ನು ಹಳಿ ಮೇಲೆ ಇರಿಸಲು ಯಶಸ್ವಿ ಕಾರ್ಯಾಚರಣೆ ಮಾಡಲಾಯಿತು. ರೈಲ್ವೇ ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ರೈಲು ಜಮ್ಮುವಿಗೆ ಹೊರಟಿದೆ, ಈ ರೈಲು ಕ್ಯಾಂಟ್ ನಿಲ್ದಾಣದ ಐದನೇ ಲೈನ್ ಮೂಲಕ ಗೋರಖ್‌ಪುರ ಜಂಕ್ಷನ್‌ಗೆ ಚಲಿಸುತ್ತಿತ್ತು, ಈ ವೇಳೆ ಎರಡನೇ ಕೋಚ್ ಹಳಿತಪ್ಪಿತು. ಇದರಿಂದಾಗಿ ನರ್ಕಟಿಯಾಗಂಜ್ ಮಾರ್ಗದಲ್ಲಿ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು.
ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಮಾತನಾಡಿ ಕ್ಯಾಂಟ್ ನಿಲ್ದಾಣದಲ್ಲಿ ಮಿಲಿಟರಿ ವಿಶೇಷ ರೈಲು ಹಳಿತಪ್ಪಿತ್ತು. ಘಟನೆಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ. ರೈಲು ಹಳಿತಪ್ಪಿದ ಸಂದರ್ಭದಲ್ಲಿ ಈ ಮಾರ್ಗದಲ್ಲಿ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ರೈಲನ್ನು ಹಳಿಗೆ ತರಲು ಪ್ರಯತ್ನಗಳು ನಡೆದಿದ್ದು, ಅದರಲ್ಲಿ ರೈಲ್ವೇ ಯಶಸ್ವಿಯಾಗಿದೆ. ಈ ಅವಧಿಯಲ್ಲಿ, ಗೋರಖ್‌ಪುರ ಛಾಪ್ರಾ ಮುಖ್ಯ ಮಾರ್ಗದಲ್ಲಿ ರೈಲುಗಳು ಕಾರ್ಯಾಚರಣೆಯನ್ನು ಮುಂದುವರೆಸಿದವು. ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.