ಮುಂಬೈ: ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯಕ್ಕೆ ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಅವರ ಹೆಸರಿಡಲು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾರಾಷ್ಟ್ರ ಸಚಿವ ಸಂಪುಟ ಸಭೆ ಸೋಮವಾರ ಅನುಮೋದನೆ ನೀಡಿದೆ. ಸರ್ಕಾರದ ನಿರ್ಧಾರಕ್ಕೆ ವಿಶ್ವವಿದ್ಯಾಲಯದ ಉಪಕುಲಪತಿ ಅಪೂರ್ವ ಪಾಲ್ಕರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯವು ಅತ್ಯಂತ ನುರಿತ ಮತ್ತು ಉದ್ಯೋಗಾರ್ಹ ಯುವ ಪ್ರತಿಭೆಗಳನ್ನು ಸೃಷ್ಟಿಸಲು, ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಲು ಮತ್ತು ಉತ್ತಮ ಗುಣಮಟ್ಟದ ಕೌಶಲ್ಯ ಶಿಕ್ಷಣ, ಸ್ಟಾರ್ಟ್ಅಪ್ಗಳು, ಇನ್ ಕ್ಯುಬೇಷನ್, ಉದ್ಯೋಗಾರ್ಹತೆ, ತರಬೇತಿ, ಸಮಾಲೋಚನೆ, ಅಪ್ರೆಂಟಿಸ್ ಶಿಪ್, ಉದ್ಯೋಗ ತರಬೇತಿ ಮತ್ತು ಉದ್ಯಮ ಪಾಲುದಾರಿಕೆಯೊಂದಿಗೆ ಸಮಗ್ರ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಉತ್ತೇಜಿಸಲು ಸ್ಥಾಪಿಸಲಾದ ವಿಶೇಷ ವಿಶ್ವವಿದ್ಯಾಲಯವಾಗಿದೆ.
ಥಾಣೆ, ರಾಯಗಡ್ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಪ್ರಧಾನವಾಗಿ ನೆಲೆಗೊಂಡಿರುವ ಮೀನುಗಾರಿಕೆ, ಉಪ್ಪು ತಯಾರಿಕೆ ಮತ್ತು ಭತ್ತದ ಕೃಷಿಯಲ್ಲಿ ತೊಡಗಿರುವ ಕೃಷಿ ಸಮುದಾಯಕ್ಕಾಗಿ ನಿಗಮವನ್ನು ಸ್ಥಾಪಿಸಲು ಕೂಡ ಕ್ಯಾಬಿನೆಟ್ ಅನುಮೋದನೆ ನೀಡಿದೆ.