image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಹರಾ ಮರುಭೂಮಿಯಲ್ಲಿ ಪ್ರವಾಹ

ಸಹರಾ ಮರುಭೂಮಿಯಲ್ಲಿ ಪ್ರವಾಹ

ಮೊರಾಕ್ಕೊ: ಹಲವು ದಶಕಗಳ ನಂತರ ಸಹರಾ ಮರುಭೂಮಿಯಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ಧಾರಾಕಾರ ಮಳೆ ಸುರಿದಿದ್ದು, ಮರುಭೂಮಿಯ ತಾಳೆ ಮರಗಳು, ಮರಳು ದಿಬ್ಬಗಳ ನಡುವೆ ಜೀವ ಜಲ ಹರಿದಿದೆ. ಮರಳುಗಾಡಿನ ಅಲ್ಲಲ್ಲಿ ಸರೋವರಗಳು ರಚನೆಯಾಗಿವೆ. ಅನೇಕ ವರ್ಷಗಳಿಂದ ಬರಪೀಡಿತವಾಗಿದ್ದ ಪ್ರದೇಶಗಳು ಮಳೆಯಿಂದ ಹೊಸ ಬದುಕು ಪಡೆದಿವೆ.

ಮೊರಾಕ್ಕೊದ ಆಗ್ನೇಯ ದಿಕ್ಕಿನಲ್ಲಿರುವ ಮರುಭೂಮಿ ಜಗತ್ತಿನಲ್ಲೇ ಅತಿ ಶುಷ್ಕ (ಒಣ) ಪ್ರದೇಶಗಳಲ್ಲಿ ಒಂದು. ಇಲ್ಲಿ ಮಳೆ ಅಪರೂಪ. ಮೊರಾಕ್ಕೋ ಸರ್ಕಾರದ ಪ್ರಕಾರ, ಇತ್ತೀಚೆಗೆ ಎರಡು ದಿನ ಇಲ್ಲಿನ ಕೆಲವು ಭಾಗಗಳಲ್ಲಿ ಸುರಿದ ಮಳೆ ವಾರ್ಷಿಕ ಮಳೆಯ ಸರಾಸರಿ ಪ್ರಮಾಣವನ್ನು ಮೀರಿಸಿದೆ. ಇಲ್ಲಿ ವಾರ್ಷಿಕವಾಗಿ ಸರಾಸರಿ 250 ಮಿಲಿ ಮೀಟರ್‌ಗಿಂತ (10 ಇಂಚು) ಕಡಿಮೆ ಮಳೆ ಬೀಳುತ್ತದೆ.

ಹಲವು ದಶಕಗಳ ನಂತರ ಮರುಭೂಮಿ ಸಸ್ಯವರ್ಗ, ಮರಳು ದಿಬ್ಬಗಳ ನಡುವೆ ನೀರು ನಿಂತಿರುವ ದೃಶ್ಯಗಳು ನೋಡಲು ಮೋಹಕವಾಗಿವೆ. ಮರುಭೂಮಿಯಲ್ಲಿ ವಾಸಿಸುವ ಸಮುದಾಯಗಳು, ಭೇಟಿ ನೀಡುವ ಪ್ರವಾಸಿಗರಿಗರು ಈ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ.

ನಿರಂತರವಾಗಿ ಕಳೆದ 6 ವರ್ಷಗಳಿಂದಲೂ ಮೊರಾಕ್ಕೋ ತೀವ್ರ ಬರ ಎದುರಿಸುತ್ತಿದೆ. ನೀರಿಲ್ಲದೆ ಜನರು ತಮ್ಮ ಜಮೀನುಗಳನ್ನು ಪಾಳುಬಿಟ್ಟಿದ್ದಾರೆ. ಪೇಟೆ, ಪಟ್ಟಣಗಳಲ್ಲಿ ನೀರಿನ ಬಳಕೆಗೆ ಮಿತಿ ಹೇರಲಾಗಿದೆ. ಹೀಗಾಗಿ ಈಗ ಸುರಿದ ಮಳೆಯಿಂದಾಗಿ ಅಂತರ್ಜಲ ವೃದ್ಧಿಸಲಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಮರುಭೂಮಿಯಲ್ಲಿ ವಾಸಿಸುವ ಜನರ ನೀರಿನ ಬವಣೆ ನೀಗಿಸುವ ನಿರೀಕ್ಷೆ ಮೂಡಿಸಿದೆ.

Category
ಕರಾವಳಿ ತರಂಗಿಣಿ