ಇಸ್ಲಾಮಬಾದ್ : ಪಾಕಿಸ್ಥಾನದಲ್ಲಿ ಪೋಲಿಯೊ ಪ್ರಕರಣಗಳು ಪತ್ತೆಯಾಗುತ್ತಿದ್ದು, ಬಲೂಚಿಸ್ತಾನದಲ್ಲಿ 16, ಸಿಂಧ್ನಲ್ಲಿ 10, ಖೈಬರ್ ಪಖ್ತುನಖ್ವಾದಲ್ಲಿ 4 ಮತ್ತು ಪಂಜಾಬ್ ಹಾಗೂ ಇಸ್ಲಾಮಾಬಾದ್ಗಳಲ್ಲಿ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಪ್ರಸ್ತುತ ಏಳು ಪ್ರದೇಶಗಳ ಪೈಕಿ ಎರಡು ಪ್ರದೇಶಗಳು ಅಂದರೆ ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಮಾತ್ರ ಪೋಲಿಯೊ ಮುಕ್ತವಾಗಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಪೋಲಿಯೊ ವೈರಸ್ ನಾಲ್ಕು ಪ್ರಾಂತ್ಯಗಳು ಮತ್ತು ಫೆಡರಲ್ ರಾಜಧಾನಿ ಸೇರಿದಂತೆ ಐದು ಪ್ರದೇಶಗಳಲ್ಲಿ ಹರಡಿದೆ.
ಪಾಕಿಸ್ತಾನದಲ್ಲಿ ಕನಿಷ್ಠ ನಾಲ್ಕು ಹೊಸ ಪೋಲಿಯೊ ಪ್ರಕರಣಗಳು ವರದಿಯಾಗಿದ್ದು, ಈ ವರ್ಷ ಕಾಣಿಸಿಕೊಂಡ ಪೋಲಿಯೊ ಪ್ರಕರಣಗಳ ಒಟ್ಟು ಸಂಖ್ಯೆ 32 ಕ್ಕೆ ತಲುಪಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ನಾಲ್ಕು ಹೊಸ ಪ್ರಕರಣಗಳ ಪೈಕಿ ಮೂರು ಸಿಂಧ್ ಪ್ರಾಂತ್ಯದಲ್ಲಿ ಮತ್ತು ಒಂದು ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಕಂಡು ಬಂದಿವೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ರಾಷ್ಟ್ರವ್ಯಾಪಿ ನಡೆಸಲಾದ ಪೋಲಿಯೊ ಲಸಿಕಾ ಅಭಿಯಾನದಲ್ಲಿ ಪಾಕಿಸ್ತಾನ ಪೋಲಿಯೊ ನಿರ್ಮೂಲನಾ ಸಂಸ್ಥೆಯು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 33 ಮಿಲಿಯನ್ ಮಕ್ಕಳಿಗೆ ಲಸಿಕೆ ಹಾಕಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.