ಟೆಲ್ ಅವಿವ್ : ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಮಾತನಾಡಿ, ಇಸ್ರೇಲ್ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ಕಮಾಂಡರ್ಗಳು ಅವಿತಿದ್ದ ಹಿಜ್ಬುಲ್ಲಾದ ದಕ್ಷಿಣ ಮುಂಚೂಣಿಯ ಡಜನ್ಗಟ್ಟಲೆ ಭೂಗತ ಕಮಾಂಡ್ ಕೇಂದ್ರಗಳ ಮೇಲೆ ವೈಮಾನಿಕ ದಾಳಿ ನಡೆಸಿ ಅವುಗಳನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ.
ಲೆಬನಾನ್ನಲ್ಲಿನ ಭೂಗತ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳ ಮೇಲೆ ನಡೆಸಲಾದ ವ್ಯಾಪಕ ವೈಮಾನಿಕ ಬಾಂಬ್ ದಾಳಿಯಲ್ಲಿ 50 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ದಕ್ಷಿಣ ಲೆಬನಾನ್ನಲ್ಲಿ ಹಿಜ್ಬುಲ್ಲಾದ ದಕ್ಷಿಣ ಫ್ರಂಟ್ ಭೂಗತ ಮೂಲಸೌಕರ್ಯ ಮತ್ತು ಕಮಾಂಡ್ ಕೇಂದ್ರಗಳ ವ್ಯಾಪಕ ಜಾಲವನ್ನು ನಿರ್ಮಿಸಿದೆ. ಭೂ ಆಕ್ರಮಣದ ಸಮಯದಲ್ಲಿ ಐಡಿಎಫ್ ಸೈನಿಕರ ಮೇಲೆ ದಾಳಿ ಮಾಡಲು ಮತ್ತು ಇಸ್ರೇಲ್ನ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸಲು ಅನುಕೂಲವಾಗುವಂತೆ ಇವನ್ನು ವಿನ್ಯಾಸಗೊಳಿಸಲಾಗಿದೆ" ಎಂದು ಹಗರಿ ತಿಳಿಸಿದ್ದಾರೆ.
ಹಿಜ್ಬುಲ್ಲಾದ ದಕ್ಷಿಣ ಮುಂಚೂಣಿ ಮತ್ತು ರಾಡ್ವಾನ್ ಪಡೆಗಳ ಆರು ಹಿರಿಯ ಕಮಾಂಡರ್ಗಳು ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಬಿಂಟ್ ಜೆಬೀಲ್ ಪ್ರದೇಶದ ಫಿರಂಗಿ ಕಮಾಂಡರ್ ಎಂದು ಗುರುತಿಸಲ್ಪಟ್ಟ ಅಲಿ ಅಹ್ಮದ್ ಇಸ್ಮಾಯಿಲ್ ಮತ್ತು ಹಿಜ್ಬುಲ್ಲಾದ ಗಣ್ಯ ಕಮಾಂಡೋ ಘಟಕವಾದ ರಾಡ್ವಾನ್ ಫೋರ್ಸ್ನ ಬಿಂಟ್ ಜೆಬೀಲ್ ದಾಳಿ ವಲಯದ ಮುಖ್ಯಸ್ಥ ಅಹ್ಮದ್ ಹಸನ್ ನಜಲ್ ಸೇರಿದ್ದಾರೆ ಎಂದು ಹಗರಿ ಹೇಳಿರುವುದಾಗಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.