ಕಾಶ್ಮೀರ : ಒಮರ್ ಅಬ್ದುಲ್ಲಾ ಮಧ್ಯಮದೊಂದಿಗೆ ಮಾತನಾಡುತ್ತಾ "ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವಂತೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸುವುದು ಜಮ್ಮು ಮತ್ತು ಕಾಶ್ಮೀರ ಕ್ಯಾಬಿನೆಟ್ನ ಮೊದಲ ಕೆಲಸವಾಗಲಿದೆ. ನಂತರ ಮುಖ್ಯಮಂತ್ರಿಗಳು ಈ ನಿರ್ಣಯವನ್ನು ದೆಹಲಿಗೆ ತೆಗೆದುಕೊಂಡು ಹೋಗಿ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿದೆ" ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸುವುದು ಜಮ್ಮು ಕಾಶ್ಮೀರ ಸಚಿವ ಸಂಪುಟದ ಮೊದಲ ನಿರ್ಣಯವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ನಾವು ರಚಿಸಲಿರುವ ಸರ್ಕಾರವು ನಮಗೆ ಮತ ಹಾಕಿದವರು, ನಮ್ಮ ವಿರುದ್ಧ ಮತ ಚಲಾಯಿಸಿದವರು ಮತ್ತು ಮತವನ್ನೇ ಚಲಾಯಿಸದವರು ಹೀಗೆ ಎಲ್ಲರನ್ನೂ ಪ್ರತಿನಿಧಿಸಲಿದೆ. ಹೊಸ ಸರ್ಕಾರದಲ್ಲಿ ಭಾಗವಾಗದ ಚುನಾಯಿತ ಪ್ರತಿನಿಧಿಗಳ ಪ್ರದೇಶಗಳಿಗೆ ವಿಶೇಷ ಗಮನ ನೀಡಲಾಗುವುದು.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಪುನಃಸ್ಥಾಪಿಸುವುದಾಗಿ ಪ್ರಧಾನಿ, ಗೃಹ ಸಚಿವರು ಮತ್ತು ಇತರರು ಭರವಸೆ ನೀಡಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ಬಂದರೆ ಮಾತ್ರ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಲಾಗುವುದು ಎಂದು ಅವರು ಯಾವತ್ತೂ ಹೇಳಿಲ್ಲ" ಎಂದು ಅಬ್ದುಲ್ಲಾ ತಿಳಿಸಿದರು. "370 ನೇ ವಿಧಿಯನ್ನು ಪುನಃಸ್ಥಾಪಿಸುವ ಬೇಡಿಕೆಯನ್ನು ನಮ್ಮ ಪಕ್ಷ ಕೈಬಿಡುವುದಿಲ್ಲ. ಈ ಬಗ್ಗೆ ನಮ್ಮ ನಿಲುವು ಎಂದಿಗೂ ಬದಲಾಗುವುದಿಲ್ಲ" ಎಂದು ಅವರು ಪ್ರತಿಪಾದಿಸಿದರು.