ನವದೆಹಲಿ : ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಕಣಕ್ಕೆ ಇಳಿದ ಏಕಮಾತ್ರ ಉದ್ದೇಶ ಅದು ಕಾಂಗ್ರೆಸ್ಗೆ ಹಾನಿ ಮಾಡುವುದಾಗಿತ್ತು. ಎಎಪಿಯ ಈ ನಡೆ ವಿಪಕ್ಷಗಳ ಮೈತ್ರಿ ಕೂಟಕ್ಕೆ ಮಾಡಿದ ದ್ರೋಹ ಎಂದು ಸ್ವಾತಿ ಮಾಲಿವಾಲ ವಾಗ್ದಾಳಿ ನಡೆಸಿದ್ದಾರೆ.ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ ಮಾಡುವ ಮೂಲಕ ಇಂಡಿಯಾ (I.N.D.I.A) ಒಕ್ಕೂಟಕ್ಕೆ ದ್ರೋಹ ಮಾಡಿದ್ದು, ಕಾಂಗ್ರೆಸ್ ಮತ ವಿಭಜಿಸಿದೆ ಎಂದು ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಆರೋಪಿಸಿದ್ದಾರೆ.
ಎಎಪಿ ಬಿಜೆಪಿಯನ್ನು ಮಣಿಸುವ ಉದ್ದೇಶಕ್ಕೆ ಬದಲಾಗಿ ಕಾಂಗ್ರೆಸ್ಗೆ ಹಾನಿ ಮಾಡಲು ಅಭ್ಯರ್ಥಿಗಳನ್ನು ಎಎಪಿ ಕಣಕ್ಕೆ ಇಳಿಸಿತು. ವಿನೇಶ್ ಫೋಗಟ್ ವಿರುದ್ಧ ಕೂಡ ಇದೇ ನಿಲುವನ್ನು ಎಎಪಿ ಹೊಂದಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು, ನಿಮ್ಮ ಸ್ವಂತ ರಾಜ್ಯದಲ್ಲೇ ನೀವು ಡಿಪೋಸಿಟ್ ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಚುನಾವಣೆ ಸ್ಪರ್ಧೆ ಏಕೆ ಎಂದು ಪ್ರಶ್ನಿಸಿದ ಮಾಲಿವಾಲ್, ನಿಮ್ಮ ದುರಹಂಕಾರ ಪಕ್ಕಕ್ಕಿಟ್ಟು, ಜನರಿಗಾಗಿ ಕೆಲಸ ಮಾಡಲು ಇನ್ನೂ ಸಮಯವಿದೆ ಎಂದು ಎಚ್ಚರಿಸಿದ್ದಾರೆ.ಹರಿಯಾಣದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದಂತೆ ಎಎಪಿ ರಾಜ್ಯಸಭಾ ಸದಸ್ಯೆ ತಮ್ಮ ಸ್ವಪಕ್ಷದ ವಿರುದ್ಧವೇ ಹರಿಹಾಯ್ದಿದ್ದಾರೆ. ಮತ ಎಣಿಕೆ ಆರಂಭದಾದ ಮೊದಲೆರಡು ಗಂಟೆಯಲ್ಲಿ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆಗಳಿಸಿದರೂ, ಬಳಿಕ ಬಿಜೆಪಿ ಮುನ್ನಡೆ ಸಾಧಿಸಿತು. ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, 90 ಕ್ಷೇತ್ರದಲ್ಲಿ ಬಿಜೆಪಿ 48 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 35 ಸ್ಥಾನದಲ್ಲಿ ಗೆಲುವು ಕಂಡಿದೆ.