ನವದೆಹಲಿ: ಹುಟ್ಟಿನಿಂದಲೂ ಎಲ್ಲರೂ ಸಮಾನರು ಎಂಬುದನ್ನು ಸಂವಿಧಾನದ 17ನೇ ವಿಧಿ ತಿಳಿಸುತ್ತದೆ. ವ್ಯಕ್ತಿಯ ಸ್ಥಿತಿ, ಜಾತಿ, ಸ್ಪರ್ಶದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದು ಹೇಳುತ್ತದೆ. ಯಾವುದೇ ಜೈಲಿನಲ್ಲಿರುವ ವ್ಯಕ್ತಿಗೆ ಘನತೆಯನ್ನು ನೀಡದಿರುವುದು ಪೂರ್ವ ವಸಾಹತು ಶಾಹಿ ವ್ಯವಸ್ಥೆಯಾಗಿದೆ. ಜೈಲಿನಲ್ಲಿ ಜಾತಿ ಆಧಾರಿತ ತಾರತಮ್ಯ ಸಹಿಸಲು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹಾಗೂ ನ್ಯಾ ಜೆಬಿ ಪರ್ದಿವಾಲಾ ಮತ್ತು ನ್ಯಾ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ಈ ಆದೇಶ ನೀಡಿದ್ದು, ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಅಲ್ಲದೇ, ಜೈಲಿನಲ್ಲಿರುವ ಖೈದಿಗಳು ಮತ್ತು ವಿಚಾರಣಾಧೀನ ಖೈದಿಗಳ ರಿಜಿಸ್ಟರ್ನಲ್ಲಿರುವ ಜಾತಿ ಆಧಾರಿತ ಯಾವುದೇ ಉಲ್ಲೇಖ ಮತ್ತು ಜಾತಿ ಕಾಲಂ ಅನ್ನು ತೆಗೆದು ಹಾಕಬೇಕು ಎಂದು ತಿಳಿಸಿದೆ.
ಸಂವಿಧಾನವು ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ಕೊನೆಗಾಣಿಸುವಂತೆ ತಿಳಿಸುತ್ತದೆ. ಜೈಲಿನಲ್ಲಿ ಇರುವವರು ಘನತೆಯಿಂದ ಬದುಕುವ ಹಕ್ಕನ್ನು ಹೊಂದಿದ್ದಾರೆ. ಕೈದಿಗಳಿಗೆ ಘನತೆಯಿಂದ ಬದುಕಲು ಬಿಡದಿರುವುದು ವಸಾಹತುಶಾಹಿ ಮತ್ತು ಪೂರ್ವ ವಸಾಹತುಶಾಹಿ ವ್ಯವಸ್ಥೆಯಾಗಿದೆ. ಇಂತಹ ದಬ್ಬಾಳಿಕೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ತೆಗೆದು ಹಾಕಬೇಕಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ಜಾತಿ ತಾರತಮ್ಯ ತೊಡೆದುಹಾಕಲು ಸಾಧ್ಯವಾಗಲಿಲ್ಲ ಎಂದರು.