ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ ದಲಿತ ನಾಯಕ ಅಶೋಕ್ ತನ್ವರ್ ಅವರು ಗುರುವಾರ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದಾರೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದಂತಾಗಿದೆ ಎನ್ನಲಾಗಿದೆ. ಮಹೇಂದ್ರಗಢ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಸಮ್ಮುಖದಲ್ಲಿ ತನ್ವರ್ ಮತ್ತೆ ಕಾಂಗ್ರೆಸ್ ಸೇರ್ಪಡೆಯಾದರು.
ತನ್ವರ್ ಅವರ ಪಕ್ಷಾಂತರದಿಂದಾಗಿ ರಾಜ್ಯದ ರಾಜಕೀಯದಲ್ಲಿ ಸಣ್ಣ ಬಿರುಗಾಳಿ ಎದ್ದಿದೆ. ಕಾಂಗ್ರೆಸ್ ಸೇರ್ಪಡೆಗೆ ಕೆಲವೇ ಗಂಟೆಗಳ ಮುನ್ನ ಅವರು ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರು ಮತ್ತು ಹಠಾತ್ತಾಗಿ ರಾಹುಲ್ ಗಾಂಧಿಯವರ ರ‍್ಯಾಲಿಯಲ್ಲಿ ಕಾಣಿಸಿಕೊಂಡ ಅವರು ಪಕ್ಷ ಸೇರ್ಪಡೆಯಾಗಿದ್ದು ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ತನ್ವರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದು, ಅವರು ಪಕ್ಷಕ್ಕೆ ಮರಳುವುದರಿಂದ ರಾಜ್ಯದಲ್ಲಿ ದಲಿತರ ಹಕ್ಕುಗಳ ಹೋರಾಟವನ್ನು ಬಲಪಡಿಸುತ್ತದೆ ಎಂದು ಹೇಳಿದೆ.
"ನಮ್ಮ ಹೋರಾಟ ಮತ್ತು ಸಮರ್ಪಣೆಯಿಂದ ಪ್ರಭಾವಿತರಾದ ಹಿರಿಯ ಬಿಜೆಪಿ ನಾಯಕ ಮತ್ತು ಹರಿಯಾಣದ ಪ್ರಚಾರ ಸಮಿತಿಯ ಸದಸ್ಯರೂ ಆಗಿರುವ ತನ್ವರ್ ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ಅವರಿಗೆ ಕಾಂಗ್ರೆಸ್ ಕುಟುಂಬಕ್ಕೆ ಸ್ವಾಗತ, ಭವಿಷ್ಯಕ್ಕಾಗಿ ಶುಭ ಹಾರೈಕೆಗಳು" ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.