ಪುಣೆ: ಕ್ರಿಮಿನಲ್ ಪ್ರಕರಣಗಳಲ್ಲಿ ಬಾಲಾಪರಾಧಿಗಳನ್ನು ವ್ಯಾಖ್ಯಾನಿಸುವ ಕಾನೂನುಬದ್ಧ ವಯಸ್ಸನ್ನು ಪ್ರಸ್ತುತ 18ರಿಂದ 14ಕ್ಕೆ ಇಳಿಸಬೇಕು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರವಾದ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಇತ್ತೀಚೆಗೆ ಬಾರಾಮತಿಯಲ್ಲಿ ಸ್ನೇಹಿತನನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪ್ರಕರಣದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು 17 ವರ್ಷ ವಯಸ್ಸಿನವರಾಗಿದ್ದಾರೆ. ಆದರೆ ಪ್ರಸ್ತುತ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಆರೋಪಿಯು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮಾತ್ರ ಕಠಿಣ ಶಿಕ್ಷೆ ವಿಧಿಸಬಹುದು ಎಂದರು.
"ಈ ಹಿಂದೆ 18ರಿಂದ 20 ವರ್ಷ ವಯಸ್ಸಿನವರನ್ನು ಪ್ರೌಢಾವಸ್ಥೆಯವರೆಂದು ಪರಿಗಣಿಸುವುದು ಸೂಕ್ತವಾಗಿತ್ತು. ಆದರೆ ಕಾಲ ಬದಲಾಗಿದ್ದು, ಇಂದಿನ ಮಕ್ಕಳು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ತಿಳುವಳಿಕೆ ಹೊಂದಿದ್ದಾರೆ. ನಾವು ಚಿಕ್ಕವರಾಗಿದ್ದಾಗ 5ನೇ ತರಗತಿಗೆ ಬರುವವರೆಗೂ ತಿಳಿಯದಂಥ ವಿಷಯಗಳ ಬಗ್ಗೆ ಇಂದಿನ ಚಿಕ್ಕ ಮಕ್ಕಳು ಪ್ರಶ್ನೆ ಕೇಳುತ್ತಾರೆ. ಹೀಗಿರುವಾಗ ಬಾಲಾಪರಾಧಿ ವಯಸ್ಸಿನ ಮಿತಿಯನ್ನು 18ರಿಂದ 14ಕ್ಕೆ ಇಳಿಸಬೇಕು ಎಂದು ಕೆಲವು ಅಧಿಕಾರಿಗಳ ನಿಲುವಾಗಿದೆ" ಎಂದು ಪವಾರ್ ಹೇಳಿದರು.
ಅಪರಾಧ ಮಾಡಿದ ನಂತರ (ಅವರ ವಯಸ್ಸಿನ ಕಾರಣ) ಕಠಿಣ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬುದು ಇಂದಿನ ಹದಿನೇಳು ವರ್ಷದ ಮಕ್ಕಳಿಗೆ ಚೆನ್ನಾಗಿ ತಿಳಿದಿದೆ. 15, 16 ಅಥವಾ 17 ವರ್ಷದ ಯುವಕರು ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ ಎಂಬುದು ಕಂಡುಬರುತ್ತಿದೆ. ಹೊಸ ಕಾನೂನುಗಳನ್ನು ರೂಪಿಸುವಾಗ ನಾವು ಈ ವಿಚಾರವನ್ನು ಕೇಂದ್ರಕ್ಕೆ ತಿಳಿಸಬೇಕಾಗಿದೆ" ಎಂದು ಪವಾರ್ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಂದಿನ ಬಾರಿ ಭೇಟಿಯಾದಾಗ ಈ ವಿಷಯದ ಬಗ್ಗೆ ಚರ್ಚಿಸಲು ಮತ್ತು ಈ ವಿಷಯದ ಬಗ್ಗೆ ಕೇಂದ್ರಕ್ಕೆ ಔಪಚಾರಿಕ ಪತ್ರ ಬರೆಯಲು ಉದ್ದೇಶಿಸಿರುವುದಾಗಿ ಉಪ ಮುಖ್ಯಮಂತ್ರಿ ಪವಾರ್ ಹೇಳಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೂ ಈ ವಿಷಯ ಚರ್ಚಿಸುವುದಾಗಿ ಪವಾರ್ ತಿಳಿಸಿದರು.