ಪಾಕಿಸ್ತಾನ : ವಿಶ್ವದ ಎಲ್ಲ ರಾಷ್ಟ್ರಗಳು ಪೋಲಿಯೊ ರೋಗದಿಂದ ಮುಕ್ತವಾಗಿದ್ದರೆ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಮಾತ್ರ ಇನ್ನೂ ಈ ಬಾಧೆಯಿಂದ ಹೊರಬಂದಿಲ್ಲ. ಎರಡು ರಾಷ್ಟ್ರಗಳಲ್ಲಿ ಪೋಲಿಯೊ ಪ್ರಕರಣಗಳು ಹಠಾತ್ ಏರಿಕೆ ಕಾಣುತ್ತಿವೆ. ಸದ್ಯ ಪಾಕ್ನಲ್ಲಿ 26, ಅಫ್ಘಾನಿಸ್ತಾನದಲ್ಲಿ 20ಕ್ಕೂ ಅಧಿಕ ಕೇಸ್ಗಳು ಸಕ್ರಿಯವಾಗಿವೆ.
ಇತ್ತೀಚೆಗೆ ಪಾಕಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಎರಡು ಮತ್ತು ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ್ಲಿ ಎರಡು ಪೋಲಿಯೊ ಪ್ರಕರಣಗಳು ವರದಿಯಾಗಿವೆ. ರೋಗವನ್ನು ನಿರ್ಮೂಲನೆ ಮಾಡುವ ಜಾಗತಿಕ ಪ್ರಯತ್ನಗಳಿಗೆ ಇದು ಸವಾಲಾಗಿದೆ. ಇತ್ತ, ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂಎಚ್ಒ) ಎರಡು ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಪೋಲಿಯೊ ಪ್ರಕರಣಗಳ ಬಗ್ಗೆ ಎಚ್ಚರಿಕೆ ರವಾನಿಸಿದೆ.
ಅಫ್ಘಾನಿಸ್ತಾನದಲ್ಲಿ ಪೋಲಿಯೊ ಉಲ್ಬಣಿಸುತ್ತಿದ್ದರೂ, ಅಲ್ಲಿನ ತಾಲಿಬಾನ್ ಸರ್ಕಾರ ಲಸಿಕೆ ನೀಡುವುದನ್ನು ನಿಷೇಧಿಸಿದೆ. ಹೀಗಾಗಿ ಪೋಲಿಯೊ ಪ್ರಕರಣಗಳ ಪ್ರಸರಣ ಹೆಚ್ಚುತ್ತಿದೆ. ಪಾಕಿಸ್ತಾನದಲ್ಲಿ ಇತ್ತೀಚೆಗೆ ಮೂರು ಹೊಸ ಪೋಲಿಯೊ ಪ್ರಕರಣಗಳನ್ನು ಡಬ್ಲ್ಯುಎಚ್‌ಒ ದೃಢಪಡಿಸಿದೆ. ದೇಶಾದ್ಯಂತ ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
WHOದ ಪ್ರಾದೇಶಿಕ ನಿರ್ದೇಶಕ ಡಾ.ಅಹ್ಮದ್ ಅಲ್-ಮಂಧಾರಿ ಪ್ರತಿಕ್ರಿಯಿಸಿ, "ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ರಾಷ್ಟ್ರಗಳು ಪೋಲಿಯೊ ನಿರ್ಮೂಲನೆಗೆ ಒಟ್ಟಾಗಿ ಕೆಲಸ ಮಾಡಬೇಕಿದೆ. ಪ್ರಸರಣವನ್ನು ತಗ್ಗಿಸಲು ದ್ವಿಪಕ್ಷೀಯವಾಗಿ ಶ್ರಮಿಸಬೇಕಿದೆ. ಆದರೆ, ಉಭಯ ರಾಷ್ಟ್ರಗಳ ಮಧ್ಯೆ ರಾಜಕೀಯ ತಿಕ್ಕಾಟದಿಂದಾಗಿ ಈ ಪ್ರಯತ್ನಕ್ಕೆ ಹಿನ್ನಡೆ ಉಂಟಾಗಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಮಧ್ಯೆ ವೈದ್ಯಕೀಯ ಸಹಕಾರಗಳು ಬಂದ್ ಆಗಿವೆ. ಇದು ಇನ್ನಷ್ಟು ಸಮಸ್ಯೆ ಉಂಟುಮಾಡಲಿದೆ" ಎಂದು ತಿಳಿಸಿದ್ದಾರೆ.
ಜ್ವರ, ತಲೆನೋವು, ವಾಂತಿ, ಆಯಾಸ ಮತ್ತು ಕೈಕಾಲು ನೋವು ಈ ರೋಗದ ಲಕ್ಷಣಗಳು. ಪೋಲಿಯೊ ಲಸಿಕೆಯನ್ನು ಪಡೆಯುವುದರ ಮೂಲಕ ಈ ವೈರಸ್ ಅನ್ನು ತಡೆಗಟ್ಟಬಹುದು. ಈ ಲಸಿಕೆಯನ್ನು ಅನೇಕ ಸಲ ನೀಡಲಾಗುತ್ತದೆ. ಲಸಿಕೆಯ ಎರಡು ಹನಿಗಳು ಮಗುವನ್ನು ಜೀವನದುದ್ದಕ್ಕೂ ರಕ್ಷಿಸುತ್ತದೆ.