ತಿರುಪತಿ: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಮಂಗಳವಾರ ಸಂಜೆ ತಿರುಮಲ ದೇವಸ್ಥಾನಕ್ಕೆ ಕಾಲ್ನಡಿಗೆಯ ಮೂಲಕ ಪ್ರಯಾಣ ಬೆಳೆಸಿದ್ದಾರೆ. ಅಲಿಪಿರಿ ಪಾದಲ ಮಂಟಪದಲ್ಲಿ ಪೂಜೆ ಸಲ್ಲಿಸಿದ ನಂತರ ಅವರು ತಿರುಮಲಕ್ಕೆ ತಮ್ಮ ಪ್ರಯಾಣ ಪ್ರಾರಂಭಿಸಿದರು. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದು, ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರಾಯಶ್ಚಿತ್ತವಾಗಿ 11 ದಿನಗಳಿಂದ ನಡೆಸುತ್ತಿರುವ ತಮ್ಮ ಪ್ರಾಯಶ್ಚಿತ್ತ ದೀಕ್ಷಾ ಅಭಿಯಾನವನ್ನು ಪವನ್ ಕಲ್ಯಾಣ್ ಕೊನೆಗೊಳಿಸಲಿದ್ದಾರೆ.
ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರನ್ನು ಸ್ವಾಗತಿಸಲು ಜನಸೇನಾ ಮತ್ತು ಅದರ ಮಿತ್ರ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಹಳಷ್ಟು ಸಂಖ್ಯೆಯ ನಾಯಕರು ಮತ್ತು ಕಾರ್ಯಕರ್ತರು ಅಲಿಪಿರಿಯಲ್ಲಿ ಜಮಾಯಿಸಿದ್ದರು. ಪೊಲೀಸರು ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಸಿಬ್ಬಂದಿಯ ಬಿಗಿ ಭದ್ರತೆಯ ನಡುವೆ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ತಮ್ಮ ಕಾಲ್ನಡಿಗೆ ಯಾತ್ರೆಯನ್ನು ಪ್ರಾರಂಭಿಸಿದರು. ದರ್ಶನದ ನಂತರ, ಪವನ್ ಕಲ್ಯಾಣ್ ಅನ್ನ ಪ್ರಸಾದಂ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಗುಂಟೂರು ಜಿಲ್ಲೆಯ ನಂಬೂರಿನ ಶ್ರೀ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಂದು ಪುರೋಹಿತರಿಂದ ಪೂಜೆ ಮತ್ತು ಧಾರ್ಮಿಕ ಆಚರಣೆಗಳನ್ನು ನೆರವೇರಿಸಿದ ನಂತರ ಪವನ್ ಕಲ್ಯಾಣ್ ದೀಕ್ಷಾ ಅಭಿಯಾನವನ್ನು ಪ್ರಾರಂಭಿಸಿದರು. ಹಿಂದೆ ಅಧಿಕಾರದಲ್ಲಿದ್ದವರು ಮಾಡಿದ ಪಾಪಗಳನ್ನು ಶುದ್ಧೀಕರಿಸುವ ಶಕ್ತಿಯನ್ನು ನೀಡುವಂತೆ ದೇವರನ್ನು ಪ್ರಾರ್ಥಿಸಿ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದ ಪಡೆಯುವುದಾಗಿ ಆವಾಗ ಅವರು ಹೇಳಿದ್ದರು.