ಶ್ರೀನಗರ ಮತ್ತು ಜಮ್ಮು: ಲೆಬನಾನ್ನಲ್ಲಿ ಹಿಜ್ಬುಲ್ಲಾ ಬಂಡುಕೋರರ ಗುಂಪಿನ ನಾಯಕ ಸೈಯದ್ ಹಸನ್ ನಸ್ರಲ್ಲಾ ಹತ್ಯೆ ಖಂಡಿಸಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಭಾನುವಾರದ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿದ್ದನ್ನು ಬಿಜೆಪಿ ಟೀಕಿಸಿದೆ.
ಹಿಜ್ಬುಲ್ಲಾ ನಾಯಕನ ಹತ್ಯೆಯಾದರೆ, ಮೆಹಬೂಬಾ ಮುಫ್ತಿ ಅವರಿಗೆ ಏನು ಸಮಸ್ಯೆ?. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅವರೇಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದೆ. ಇವರ ಮತಬ್ಯಾಂಕ್ ರಾಜಕೀಯವನ್ನು ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಆರ್‌ಪಿ ಸಿಂಗ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಮೆಹಬೂಬಾ ಮುಫ್ತಿ ಅವರಿಗೆ ಲೆಬನಾನ್ನಲ್ಲಿ ಹಿಜ್ಬುಲ್ಲಾ ನಾಯಕನ ಹತ್ಯೆಯಾದರೆ, ಸಮಸ್ಯೆಯಾಗುತ್ತದೆ. ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಅವಿರತ ದೌರ್ಜನ್ಯದ ಬಗ್ಗೆ ಒಂದು ದಿನವೂ ಮಾತನಾಡಲಿಲ್ಲ. ಇವರಿಗೆ ಪ್ಯಾಲೆಸ್ಟೈನ್ ಮತ್ತು ಹಿಜ್ಬುಲ್ಲಾ ನಾಯಕರ ಹತ್ಯೆಗಳು ನೋವು ತಂದಿವೆ ಎಂದು ಟೀಕಿಸಿದ್ದಾರೆ.
ಉಗ್ರರ ಬಗ್ಗೆ ಮೆಹಬೂಬಾ ಮುಫ್ತಿ ಅವರು ಮಾತ್ರವಲ್ಲ, ಇಂಡಿಯಾ ಕೂಟದ ನಾಯಕರೂ ಮೃದು ಧೋರಣೆ ಹೊಂದಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕೂಡ ಹತ್ಯೆಯಾದ ಭಯೋತ್ಪಾದಕರಿಗಾಗಿ ಬಾಟ್ಲಾ ಹೌಸ್ನಲ್ಲಿ ಕಣ್ಣೀರು ಸುರಿಸಿದ್ದರು. ಇವರಿಗೆಲ್ಲಾ ದೇಶ ಮೊದಲು ಎಂಬ ನೀತಿಯಿಲ್ಲ. ಮತವೇ ಇವರಿಗೆ ಮುಖ್ಯ ಎಂದು ಆರೋಪಿಸಿದರು.