image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿ, ಕಾಂಗ್ರೆಸ್​ಗಾಗಿ ದಲಿತರು ಮತ ವ್ಯರ್ಥ ಮಾಡಿಕೊಳ್ಳಬೇಡಿ: ಮಾಯಾವತಿ ಮನವಿ

ಬಿಜೆಪಿ, ಕಾಂಗ್ರೆಸ್​ಗಾಗಿ ದಲಿತರು ಮತ ವ್ಯರ್ಥ ಮಾಡಿಕೊಳ್ಳಬೇಡಿ: ಮಾಯಾವತಿ ಮನವಿ

ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ದಲಿತರ ಬಗ್ಗೆ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವನೆ ಹೊಂದಿವೆ ಎಂದು ಭಾನುವಾರ ಆರೋಪಿಸಿರುವ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ, ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಬಿಎಸ್​ಪಿಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಮತದಾರರು ಈ ಐತಿಹಾಸಿಕ ನಿರ್ಲಕ್ಷ್ಯದ ಬಗ್ಗೆ ಜಾಗರೂಕರಾಗಿರಬೇಕು ಎಂದು ಅವರು ಮನವಿ ಮಾಡಿದರು.

"ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಈ ಸಮಯದಲ್ಲಿ ಕಾಂಗ್ರೆಸ್ ದಲಿತರನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದು ಮತ್ತು ತಿರಸ್ಕಾರ ಭಾವನೆಯಿಂದ ನೋಡುತ್ತಿರುವುದು ಆ ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ. ಆ ಪಕ್ಷದ ನಿಲುವುಗಳು ಈಗ ಸರಿಯಾಗಿಲ್ಲ ಎಂದ ಮೇಲೆ ಭವಿಷ್ಯದಲ್ಲಿ ನಾವು ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯ? ಹೀಗಾಗಿ ದಲಿತರು ಕಾಂಗ್ರೆಸ್​ ಅಥವಾ ಬಿಜೆಪಿಗೆ ಮತ ನೀಡಿ ತಮ್ಮ ಮತವನ್ನು ವ್ಯರ್ಥ ಮಾಡಬಾರದು" ಎಂದು ಮಾಯಾವತಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಕಾಂಗ್ರೆಸ್ ನಿರಂತರವಾಗಿ ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿದ ಅವರು, "ದಲಿತರು ಬಿಎಸ್​ಪಿಗೆ ಸಾಮೂಹಿಕವಾಗಿ ಮತ ಚಲಾಯಿಸಬೇಕು. ದಲಿತರ ಹಿತಾಸಕ್ತಿಗಳನ್ನು ರಕ್ಷಿಸಲು, ಅವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ನಿರಂತರವಾಗಿ ಹೋರಾಡುವ ಏಕೈಕ ಪಕ್ಷ ಬಿಎಸ್​ಪಿ ಆಗಿದೆ" ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್, ಬಿಜೆಪಿ ಅಥವಾ ಇತರ ಯಾವುದೇ ಮೈತ್ರಿಕೂಟಗಳ ಸುಳ್ಳು ಭರವಸೆಗಳಿಂದ ಪ್ರಭಾವಿತರಾಗದಂತೆ ಜಮ್ಮು ಮತ್ತು ಕಾಶ್ಮೀರದ ದಲಿತ ಸಮುದಾಯಕ್ಕೆ ಅವರು ಮನವಿ ಮಾಡಿದರು. ಆ ಪಕ್ಷಗಳ ದಲಿತ ವಿರೋಧಿ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು, ದಲಿತ ಮತದಾರರು ತಮ್ಮ ಅಮೂಲ್ಯವಾದ ಮತಗಳನ್ನು ಬಿಎಸ್​ಪಿಗೆ ಮಾತ್ರ ಚಲಾಯಿಸಬೇಕು ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ