ವಿಶ್ವಸಂಸ್ಥೆ: ಗಡಿಯಾಚೆಗಿನ ಭಯೋತ್ಪಾದನೆಗೆ ತಕ್ಕ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಪಾಕಿಸ್ತಾನಕ್ಕೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶನಿವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿದ ಪರಿಣಾಮ ಪಾಕಿಸ್ತಾನ ಈಗ 'ಕರ್ಮ' ಎದುರಿಸುತ್ತಿದೆ ಎಂದು ಟೀಕಿಸಿದರು.
"ಭಾರತದ ನಿಲುವನ್ನು ನಾನು ಸ್ಪಷ್ಟಪಡಿಸುತ್ತೇನೆ. ಪಾಕ್ನ ಗಡಿಯಾಚೆಗಿನ ಭಯೋತ್ಪಾದನಾ ನೀತಿ ಎಂದಿಗೂ ಯಶಸ್ವಿಯಾಗುವುದಿಲ್ಲ. ಅದಕ್ಕೆ ಖಂಡಿತಾಗಿಯೂ ತಕ್ಕ ಶಾಸ್ತಿ ಆಗಲಿದೆ" ಎಂದು ಜೈಶಂಕರ್ ಎಚ್ಚರಿಕೆ ಕೊಟ್ಟರು. ಈ ಮೂಲಕ ಜಾಗತಿಕ ವೇದಿಕೆಯಲ್ಲೇ ಭಾರತ ಕಠಿಣ ಸಂದೇಶ ರವಾನಿಸಿದೆ.
ಪಾಕಿಸ್ತಾನ ಪ್ರಧಾನಿ ಮುಹಮ್ಮದ್ ಶೆಹಬಾಜ್ ಷರೀಫ್ ಅವರು ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಜಮ್ಮು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು.
"ತನ್ನ ಜನರಲ್ಲಿ ಮತಾಂಧತೆಯನ್ನು ಹುಟ್ಟುಹಾಕಿದ ದೇಶದಲ್ಲಿ, ಅದರ ಜಿಡಿಪಿಯನ್ನು ತೀವ್ರಗಾಮಿ ಮತ್ತು ಅದರ ರಫ್ತು ಪ್ರಮಾಣವನ್ನು ಭಯೋತ್ಪಾದನೆಯ ಮೂಲಕ ಮಾತ್ರ ಅಳೆಯಲು ಸಾಧ್ಯವಾಗುತ್ತದೆ" ಎಂದು ಅವರು ವಾಗ್ದಾಳಿ ನಡೆಸಿದರು.