ನವದೆಹಲಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅಕ್ಟೋಬರ್ 5 ರಂದು ಕಾಂಗ್ರೆಸ್ ಸಾಮಾಜಿಕ ನ್ಯಾಯ ಸಮಾವೇಶವನ್ನು ಹಮ್ಮಿಕೊಂಡಿದೆ. ಇದರಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಭಾಗವಹಿಸಲಿದ್ದು, 'ಸಂವಿಧಾನ ಉಳಿಸಿ' ಅಭಿಯಾನವನ್ನು ಆರಂಭಿಸಲಿದ್ದಾರೆ. ಜೊತೆಗೆ ಈಗಿರುವ ಮೀಸಲಾತಿ ಮಿತಿಯನ್ನು ಶೇಕಡಾ 50 ರಷ್ಟು ಹೆಚ್ಚಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ವಿಧಾನಸಭೆಗೆ ಅಕ್ಟೋಬರ್ ಮೊದಲ ವಾರದಲ್ಲಿ ಚುನಾವಣಾ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ. ಹೀಗಾಗಿ ಸಾಮಾಜಿಕ ನ್ಯಾಯ ಸಮಾವೇಶವು ಮಹತ್ವ ಪಡೆದುಕೊಂಡಿದೆ. ಜೊತೆಗೆ ರಾಹುಲ್ ಅವರು ಸಂವಿಧಾನ ಉಳಿಸಿ ಅಭಿಯಾನ ಆರಂಭಿಸುವ ದಿನವೇ ಹರಿಯಾಣದಲ್ಲಿ ಮತದಾನ ನಡೆಯಲಿದೆ.
ಸಾಮಾಜಿಕ ನ್ಯಾಯ ಕಾರ್ಯಕ್ರಮಕ್ಕೆ ಕೊಲ್ಹಾಪುರವನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವಿದೆ. ರಾಜ ರಾಜರ್ಷಿ ಛತ್ರಪತಿ ಶಾಹು ಮಹಾರಾಜ್ ಅವರು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರು. ಹಾಲಿ ಕಾಂಗ್ರೆಸ್ ಸಂಸದರಾಗಿರು ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ನ್ಯಾಯದ ದೊಡ್ಡ ನಾಯಕ ಎಂದು ಸ್ಥಳೀಯರು ಬಣ್ಣಿಸಿದ್ದಾರೆ. ಹೀಗಾಗಿ ಅವರ ಕ್ಷೇತ್ರವನ್ನೇ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ.
ರಾಹುಲ್ ಗಾಂಧಿ ಅವರು ಸಮಾಜದ ದುರ್ಬಲ ವರ್ಗಗಳ ಸಂಕಷ್ಟಗಳ ಕುರಿತು ಮಾತನಾಡಲಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಅಗತ್ಯತೆ ಮತ್ತು ಮೀಸಲಾತಿಯನ್ನು ಶೇಕಡಾ 50 ಕ್ಕೆ ಹೆಚ್ಚಿಸುವ ಬಗ್ಗೆಯೂ ಘೋಷಣೆ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕ ಪ್ರವಾಸದ ವೇಳೆ ಮೀಸಲಾತಿ ಮಿತಿಗೆ ಸಂಬಂಧಿಸಿದಂತೆ ವಿಪಕ್ಷ ನಾಯಕರು ಹೇಳಿಕೆ ನೀಡಿದ್ದರು.