ನೇಪಾಳ: ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳದಲ್ಲಿ ಸಾವನ್ನಪ್ಪಿದವರ ಸಂಖ್ಯೆ ನೂರರ ಗಡಿ ದಾಟಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ 102ಕ್ಕೇರಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪೂರ್ವ ಮತ್ತು ಮಧ್ಯ ನೇಪಾಳದ ಪ್ರಮುಖ ಪ್ರದೇಶಗಳು ಜಲಾವೃತವಾಗಿದ್ದು, ದೇಶದ ಕೆಲವು ಭಾಗಗಳಲ್ಲಿ ಹಠಾತ್ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜಧಾನಿ ಕಠ್ಮಂಡು ಸೇರಿ ದೇಶದಾದ್ಯಂತ 48 ಜನರು ಸಾವನ್ನಪ್ಪಿದ್ದಾರೆ. 64 ಜನರು ನಾಪತ್ತೆಯಾಗಿದ್ದಾರೆ. 45 ಜನರು ಗಾಯಗೊಂಡಿದ್ದಾರೆ ಎಂದು ಸಶಸ್ತ್ರ ಪೊಲೀಸ್ ಪಡೆ ಮಾಹಿತಿ ನೀಡಿದೆ.
ದೇಶದ ಅನೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಹೆದ್ದಾರಿಗಳು ಮತ್ತು ರಸ್ತೆಗಳಿಗೆ ಹಾನಿಯಾಗಿದೆ. ನೂರಾರು ಮನೆಗಳು ಮತ್ತು ಸೇತುವೆಗಳನ್ನು ಮಳೆ ನೀರು ಸುತ್ತುವರೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅವ್ಯವಸ್ಥೆಯಿಂದ ಸಾವಿರಾರು ಜನರು ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಮತ್ತು ವಾಡಿಕೆಗಿಂತ ಹೆಚ್ಚು ಮಳೆಯಾದ ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದೆ ಹವಾಮಾನ ಇಲಾಖೆ ಹೇಳಿದೆ.
ಹವಾಮಾನ ಬದಲಾವಣೆಯಿಂದ ಏಷ್ಯಾದಾದ್ಯಂತ ಮಳೆಯ ಪ್ರಮಾಣ ಮತ್ತು ಸಮಯ ಬದಲಾಗುತ್ತಿದೆ. ಜೊತೆಗೆ, ಸರಿಯಾದ ಯೋಜನೆ ಇಲ್ಲದೇ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾರಣಗಳಿಂದ ನೀರು ಹರಿಯಲು ಒಳಚರಂಡಿ ವ್ಯವಸ್ಥೆ ಇಲ್ಲದೆ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.