image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಾಯವ್ಯ ಪಾಕಿಸ್ಥಾನದಲ್ಲಿ ಪಂಥೀಯ ಹಿಂಸಾಚಾರ: 46 ಜನ ಸಾವು

ವಾಯವ್ಯ ಪಾಕಿಸ್ಥಾನದಲ್ಲಿ ಪಂಥೀಯ ಹಿಂಸಾಚಾರ: 46 ಜನ ಸಾವು

ಇಸ್ಲಾಮಾಬಾದ್: ಕೃಷಿ ಬಿತ್ತನೆಗೆ ಸಂಬಂಧಿಸಿದ ಎರಡು ಕುಟುಂಬಗಳ ನಡುವಿನ ಸಣ್ಣ ವಿವಾದವು ಬೃಹತ್ ಪಂಥೀಯ ಬುಡಕಟ್ಟು ಘರ್ಷಣೆಯಾಗಿ ಮಾರ್ಪಟ್ಟಿದ್ದು, ಈ ಸಂಘರ್ಷದಲ್ಲಿ ಎಂಟು ದಿನಗಳ ಅವಧಿಯಲ್ಲಿ ಕನಿಷ್ಠ 46 ಮಂದಿ ಮೃತಪಟ್ಟು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಗಡಿಯಲ್ಲಿರುವ ಖೈಬರ್ ಪಖ್ತುನಖ್ವಾ (ಕೆಪಿ) ಪ್ರಾಂತ್ಯದ ಕುರ್ರಾಮ್ ಬುಡಕಟ್ಟು ಜಿಲ್ಲೆಯಲ್ಲಿ ನಡೆದಿದೆ.

ಈ ಜಿಲ್ಲೆಯು ಪಾಕಿಸ್ತಾನ ಪ್ರಾಂತ್ಯದ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಭಯೋತ್ಪಾದನೆ ಮತ್ತು ಉಗ್ರಗಾಮಿ ಗುಂಪುಗಳ ಚಟುವಟಿಕೆಗಳು ಮಾತ್ರವಲ್ಲದೇ, ಭೂಮಿಗಾಗಿ ದಶಕಗಳಿಂದ ಪರಸ್ಪರ ಹೋರಾಡುತ್ತಿರುವ ಪ್ರತಿಸ್ಪರ್ಧಿ ಗುಂಪುಗಳೂ ಇಲ್ಲಿವೆ.

"ಕದನವಿರಾಮ ಮೂಡಿಸಲು ಜಿಲ್ಲಾಡಳಿತ, ಪೊಲೀಸ್, ಮಿಲಿಟರಿ ಮತ್ತು ಸ್ಥಳೀಯ ಬುಡಕಟ್ಟು ಹಿರಿಯರು ಸತತವಾಗಿ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಕುರ್ರಾಮ್ ಜಿಲ್ಲಾಧಿಕಾರಿ ಜಾವೆದುಲ್ಲಾ ಮೆಹ್ಸೂದ್ ಹೇಳಿದ್ದಾರೆ.

ಬುಧವಾರ ಕದನ ವಿರಾಮ ಒಪ್ಪಂದಕ್ಕೆ ಬರಲಾದರೂ, ಕುರ್ರಾಮ್ ಜಿಲ್ಲೆಯ ಮೇಲಿನ, ಕೆಳ ಮತ್ತು ಮಧ್ಯ ತಹಸಿಲ್​ಗಳಲ್ಲಿ ಸಶಸ್ತ್ರ ಘರ್ಷಣೆಗಳು ಮುಂದುವರೆದಿವೆ. ಎರಡೂ ಕಡೆ ಸಾವುನೋವುಗಳ ಸಂಖ್ಯೆ ಖಂಡಿತವಾಗಿಯೂ ಇನ್ನೂ ಹೆಚ್ಚಾಗಲಿದೆ ಎಂದು ಪ್ರದೇಶದ ಸ್ಥಳೀಯರು ತಿಳಿಸಿದ್ದಾರೆ.

"ಸಾವಿನ ಸಂಖ್ಯೆ ವರದಿಯಾಗುತ್ತಿರುವುದಕ್ಕಿಂತ ಹೆಚ್ಚಾಗಿದೆ. ಕನಿಷ್ಠ 80 ಜನ ಈಗಾಗಲೇ ಗಾಯಗೊಂಡಿದ್ದಾರೆ. ಈ ಹೋರಾಟವು ಇನ್ನೂ ಎಷ್ಟು ಕಾಲ ಮುಂದುವರಿಯಬಹುದು ಎಂಬುದು ಗೊತ್ತಿಲ್ಲ. ಏಕೆಂದರೆ ಎರಡೂ ಬಣಗಳು ಭೂ ಹಕ್ಕುಗಳು ಮಾತ್ರವಲ್ಲದೇ ಪಂಥೀಯ ನೆಲೆಗಳಲ್ಲಿಯೂ ಪರಸ್ಪರರ ವಿರುದ್ಧ ತೀವ್ರ ಪೈಪೋಟಿಯನ್ನು ಹೊಂದಿದ್ದಾರೆ. ಇವುಗಳಲ್ಲಿ ಒಂದು ಬಣ ಸುನ್ನಿ, ಮತ್ತೊಂದು ಬಣ ಶಿಯಾ ಪಂಥಕ್ಕೆ ಸೇರಿದೆ" ಎಂದು ಸ್ಥಳೀಯರೊಬ್ಬರು ಹೇಳಿದರು.

Category
ಕರಾವಳಿ ತರಂಗಿಣಿ