ನವದೆಹಲಿ: 2024-2025ರ ಇಲಾಖಾವಾರು ಸಂಸದೀಯ ಸ್ಥಾಯಿ ಸಮಿತಿಗಳನ್ನು ಗುರುವಾರ ರಚಿಸಲಾಗಿದ್ದು, 24 ಸ್ಥಾಯಿ ಸಮಿತಿಗಳ ಪೈಕಿ ಕಾಂಗ್ರೆಸ್ಗೆ 4 ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ರಕ್ಷಣಾ ಸಮಿತಿಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸದಸ್ಯರಾಗಿದ್ದಾರೆ. ಪ್ರತಿ ಸಮಿತಿಯಲ್ಲೂ ರಾಜ್ಯಸಭಾ ಮತ್ತು ಲೋಕಸಭೆಯ ಸದಸ್ಯರಿದ್ದಾರೆ.
ಮಾಜಿ ಕೇಂದ್ರ ಸಚಿವ ರಾಧಾ ಮೋಹನ್ ಸಿಂಗ್ ರಕ್ಷಣಾ ಸಮಿತಿಯ ಅಧ್ಯಕ್ಷರಾಗಿದ್ದಾರೆ. ರಾಹುಲ್ ಗಾಂಧಿ, ಹ್ಯಾರಿಸ್ ಬೀರನ್, ಸಾಮಿಕ್ ಭಟ್ಟಾಚಾರ್ಯ, ಅಜಯ್ ಮಾಕನ್, ಡೆರೆಕ್ ಒ’ಬ್ರೇನ್, ನಬಮ್ ರೆಬಿಯಾ, ನೀರಜ್ ಶೇಖರ್, ಕಪಿಲ್ ಸಿಬಲ್, ಜಿ.ಕೆ.ವಾಸನ್ ಮತ್ತು ಸಂಜಯ್ ಯಾದವ್ ಸಮಿತಿಯ ಸದಸ್ಯರಾಗಿದ್ದಾರೆ.
ಶಿಕ್ಷಣ, ಮಹಿಳೆ, ಮಕ್ಕಳು, ಯುವ ಮತ್ತು ಕ್ರೀಡಾ ಸಮಿತಿಯ ಹೊಣೆಯನ್ನು ದಿಗ್ವಿಜಯ್ ಸಿಂಗ್ಗೆ ನೀಡಲಾಗಿದೆ. ಕೃಷಿ, ಪಶು ಸಂಗೋಪನೆ, ಆಹಾರ ಸಂಸ್ಕರಣೆ ಸಮಿತಿಯ ಜವಾಬ್ದಾರಿಯನ್ನು ಚರಂಜಿತ್ ಸಿಂಗ್ ಚನ್ನಿ ಅವರಿಗೆ ನೀಡಲಾಗಿದೆ. ಗ್ರಾಮೀಣ, ಪಂಚಾಯತ್ ರಾಜ್ ಸಮಿತಿಗೆ ಸಪ್ತಗಿರಿ ಶಂಕರ್ ಉಲಕ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿ ಮುಖ್ಯಸ್ಥರಾಗಿ ಶಶಿ ತರೂರು ಕಾರ್ಯ ನಿರ್ವಹಿಸಲಿದ್ದಾರೆ.
ಬಿಜೆಪಿಯ ರಾಧಾ ಮೋಹನ್ ಸಿಂಗ್ ರಕ್ಷಣಾ ಸಮಿತಿಯ ಮುಖ್ಯಸ್ಥರಾಗಿದ್ದು, ಭರ್ತೃಹರಿ ಮಹತಾಬ್ ಅವರು ಹಣಕಾಸು ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅನುರಾಗ್ ಠಾಕೂರ್ ಮತ್ತು ರಾಜೀವ್ ಪ್ರತಾಪ್ ರೂಬಿ ಅವರಿಗೆ ಕ್ರಮವಾಗಿ ಕಲ್ಲಿದಲು, ಗಣಿ ಮತ್ತು ಉಕ್ಕು ಹಾಗೂ ಜಲ ಸಂಪನ್ಮೂಲ ಸಮಿತಿ ನೀಡಲಾಗಿದೆ. ಬಿಜೆಪಿ ಸದಸ್ಯ ನಿಶಿಕಾಂತ್ ದುಬೆ ಅವರಿಗೆ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಗಿದೆ. ರಾಧಾ ಮೋಹನ್ ದಾಸ್ ಅಗರ್ವಾಲ್ ಗೃಹ ವ್ಯವಹಾರ ಸಮಿತಿ ಅಧ್ಯಕ್ಷರಾಗಿದ್ದು, ಟಿಎಂಸಿಯ ಡೊಲಾ ಸೇನ್ ವಾಣಿಜ್ಯ ಸಮಿತಿ ಮುಖ್ಯಸ್ಥರಾಗಿದ್ದಾರೆ.