ನ್ಯೂಯಾರ್ಕ್: ಕದನವಿರಾಮ ಮಾತುಕತೆಗಳಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ಎರಡೂ ಬಣಗಳು ತಮ್ಮ ಮಧ್ಯದ ಸಂಘರ್ಷವನ್ನು 21 ದಿನಗಳ ಕಾಲ ನಿಲ್ಲಿಸಬೇಕೆಂದು ಅಮೆರಿಕ, ಫ್ರಾನ್ಸ್ ಮತ್ತು ಇತರ ಮಿತ್ರರಾಷ್ಟ್ರಗಳು ಜಂಟಿಯಾಗಿ ಕರೆ ನೀಡಿವೆ. ಇತ್ತೀಚಿನ ದಿನಗಳಲ್ಲಿ ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳಲ್ಲಿ ಈಗಾಗಲೇ 600 ಜನ ಸಾವಿಗೀಡಾಗಿದ್ದು, ಸಾವಿರಾರು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಈ ಕರೆ ಮಹತ್ವ ಪಡೆದುಕೊಂಡಿದೆ.
ಯುಎಸ್, ಆಸ್ಟ್ರೇಲಿಯಾ, ಕೆನಡಾ, ಯುರೋಪಿಯನ್ ಯೂನಿಯನ್, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುಕೆ ಮತ್ತು ಕತಾರ್ ದೇಶಗಳು ಬುಧವಾರ ನ್ಯೂಯಾರ್ಕ್ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ ಸಭೆಯ ಸಂದರ್ಭದಲ್ಲಿ, ಸಭೆಯ ಹೊರಗೆ ಈ ಮನವಿ ಮಾಡಿವೆ.
"ಅಕ್ಟೋಬರ್ 8, 2023ರಿಂದ ಲೆಬನಾನ್ ಮತ್ತು ಇಸ್ರೇಲ್ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಇದು ಪ್ರಾದೇಶಿಕವಾಗಿ ವಿಶಾಲ ವ್ಯಾಪ್ತಿಯಲ್ಲಿ ಯುದ್ಧದ ಸ್ಥಿತಿಯನ್ನು ನಿರ್ಮಾಣ ಮಾಡುವಂತಿದ್ದು, ಬಹುದೊಡ್ಡ ಅಪಾಯ ಎದುರಾಗುವ ಸಂಭವವಿದೆ. ಇಂಥ ಯುದ್ಧವು ಇಸ್ರೇಲ್ ಅಥವಾ ಲೆಬನಾನ್ ಸೇರಿದಂತೆ ಯಾರಿಗೂ ಹಿತಕರವಲ್ಲ" ಎಂದು ದೇಶಗಳ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ನಿರಂತರ ಸಂಘರ್ಷದ ನಡುವೆ ರಾಜತಾಂತ್ರಿಕ ಮಾತುಕತೆಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಎಂದು ಮಿತ್ರರಾಷ್ಟ್ರಗಳು ಒತ್ತಿ ಹೇಳಿವೆ.
"ಗಡಿಯ ಎರಡೂ ಬದಿಗಳಲ್ಲಿನ ನಾಗರಿಕರಿಗೆ ಸುರಕ್ಷಿತ ಸ್ಥಳಕ್ಕೆ ಮರಳಲು ಅನುವು ಮಾಡಿಕೊಡುವ ರಾಜತಾಂತ್ರಿಕ ಒಪ್ಪಂದವನ್ನು ಜಾರಿಗೊಳಿಸುವ ಸಮಯವಿದು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.