ಇಸ್ರೇಲ್ : ಲೆಬನಾನ್ ಮೇಲೆ ಇಸ್ರೇಲ್ ದಾಳಿ ಮುಂದುವರಿದಿದ್ದು, ಸೋಮವಾರ ಒಂದೇ ದಿನ ನಡೆದ ವಾಯುದಾಳಿಯಲ್ಲಿ 50 ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಿಜ್ಬುಲ್ಲಾ ಉಗ್ರರ 300 ಸ್ಥಳಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ಮಾಡಿದೆ.
ಸೋಮವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 50 ಜನರು ಸಾವನ್ನಪ್ಪಿದ್ದರೆ, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದೊಂದು ವರ್ಷದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿ ಅತಿದೊಡ್ಡ ದಾಳಿ ಇದಾಗಿದೆ.
ಹಿಜ್ಬುಲ್ಲಾ ಉಗ್ರರನ್ನು ಹದ್ದುಬಸ್ತಿನಲ್ಲಿಡಲು ಇಸ್ರೇಲ್ ವಾಯುಪಡೆಯು ಅರ್ಧ ಗಂಟೆಯಲ್ಲಿ 80 ಕ್ಕೂ ಹೆಚ್ಚು ವೈಮಾನಿಕ ದಾಳಿಗಳನ್ನು ದಕ್ಷಿಣ ಲೆಬನಾನ್‌ನ ಪ್ರದೇಶಗಳಲ್ಲಿ ನಡೆಸಿದೆ. ಅದೇ ಸಮಯದಲ್ಲಿ ಪೂರ್ವ ಲೆಬನಾನ್‌ನ ಬೆಕಾ ಕಣಿವೆ ಪ್ರದೇಶದಲ್ಲೂ ಬಾಂಬ್ಗಳ ಸುರಿಮಳೆ ಸುರಿದಿದೆ. 300 ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ಸ್ಥಳಗಳನ್ನು ಗುರಿಯಾಗಿಸಲಾಗಿದೆ. ಸೋಮವಾರ ಬೆಳಗ್ಗೆ 6:30 ರಿಂದ 7:30 ರ ನಡುವೆ 150 ಕ್ಕೂ ಹೆಚ್ಚು ವಾಯುದಾಳಿಗಳನ್ನು ನಡೆಸಲಾಗಿದೆ ಎಂದು ಇಸ್ರೇಲ್ ವಾಯು ಸೇನೆ ತಿಳಿಸಿದೆ.
ಭಾನುವಾರವಷ್ಟೆ ಹಿಜ್ಬುಲ್ಲಾ ಉಗ್ರರು, ಇಸ್ರೇಲ್ನ ಹೈಫಾ ನಗರದ ಮೇಲೆ 100 ಕ್ಕೂ ಹೆಚ್ಚಿ ರಾಕೆಟ್ಗಳನ್ನು ಹಾರಿಬಿಟ್ಟಿದ್ದರು. ಇದರ ಬೆನ್ನಲ್ಲೇ, ಇಸ್ರೇಲ್ ಸೇನೆ ಲೆಬನಾನ್‌ನ 300 ಸ್ಥಳಗಳ ಮೇಲೆ ವೈಮಾನಿಕ ದಾಳಿ ಮಾಡಿದೆ.