ಉತ್ತರ ಪ್ರದೇಶ : ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟು ರೈಲನ್ನು ಹಳಿ ತಪ್ಪಿಸುವ ಮತ್ತೊಂದು ಪ್ರಯತ್ನವನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ಭಾನುವಾರ ವಿಫಲಗೊಳಿಸಲಾಗಿದೆ. ದೆಹಲಿ-ಹೌರಾ ಮಾರ್ಗದ ಪ್ರೇಮ್ ಪುರ್ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಇಡಲಾಗಿತ್ತು. ಆದರೆ ಗೂಡ್ಸ್ ರೈಲಿನ ಲೋಕೋ ಪೈಲಟ್ ದೂರದಿಂದಲೇ ಸಿಲಿಂಡರ್ ಅನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಸರಕು ಸಾಗಣೆ ರೈಲು ಕಾನ್ಪುರದಿಂದ ಪ್ರಯಾಗ್ ರಾಜ್ಗೆ ಲೂಪ್ ಲೈನ್ ಮೂಲಕ ಪ್ರಯಾಣಿಸುತ್ತಿತ್ತು. ಬೆಳಗ್ಗೆ 5:55 ರ ಸುಮಾರಿಗೆ ಹಳಿಗಳ ಮೇಲೆ 5 ಕೆಜಿ ತೂಕದ ಸಿಲಿಂಡರ್ ಬಿದ್ದಿರುವುದು ಪೈಲಟ್ ಗಮನಕ್ಕೆ ಬಂದಿದೆ. ಆಗ ಅವರು ತಕ್ಷಣವೇ ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ. ಈ ಮೂಲಕ ದೊಡ್ಡ ಅಪಘಾತವೊಂದನ್ನು ಅವರು ತಪ್ಪಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.